ಕನ್ನಡಪ್ರಭ ವಾರ್ತೆ ಯಾದಗಿರಿಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇಲ್ಲಿ ಸೇವಾ ಭಾವನೆಯಿಂದ ಕೆಲಸ ಮಾಡುವುದರಿಂದ ಇದರ ಪ್ರತಿಫಲವು ನೇರವಾಗಿ ರೈತರಿಗೆ ತಲುಪುತ್ತದೆ. ಇವುಗಳನ್ನು ಉಳಿಸಿ ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಸಲಹೆ ನೀಡಿದರು.
ಸಹಕಾರ ಸಂಘಗಳು ಗ್ರಾಮೀಣ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಇವುಗಳನ್ನು ಉಳಿಸಿ ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಹಾಗೂ ರಚನೆ ಮಾಡಲು ಕೆಎಂಎಫ್ ಕಲಬುರಗಿ, ಪಶು ಸಂಗೋಪನ ಇಲಾಖೆ ಮತ್ತು ರೂಪರೇಷೆಗಳನ್ನು ರಚಿಸಿ ರೈತ ಬಾಂಧವರಿಗೆ ಉಪಯೋಗ ಆಗುವಂತೆ ಸಂಘಗಳನ್ನು ರಚನೆ ಮಾಡಲು ಹಾಗೂ ಜಿಲ್ಲೆಯಲ್ಲಿ ಹೊಸದಾಗಿ ಮೀನುಗಾರಿಕಾ ಸಹಕಾರ ಸಂಘಗಳನ್ನು ರಚಿಸಲು ನಿರ್ದೇಶಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಿಎಸ್‌ಸಿ ಕೇಂದ್ರಗಳು, ರಸಗೊಬ್ಬರ ಮಾರಾಟ ಕೇಂದ್ರ ಹಾಗೂ ರೈತ ಉತ್ಪಾದಕ ಸಂಸ್ಥೆಯಾಗಿ ರಚಿಸಲು ರೈತರಿಗೆ ಮಾರ್ಗದರ್ಶನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಮಾರ್ಚ್ 2024ರ ಅಂತ್ಯಕ್ಕೆ ಒಟ್ಟು 109 ಸಂಘಗಳು ಕಾರ್ಯನಿರ್ವಸುಹಿತ್ತಿದ್ದು, ಸದರಿ ಯೋಜನೆ ಅಡಿಯಲ್ಲಿ ಮೊದಲನೇ ಹಂತದಲ್ಲಿ 86 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಗಣಕಯಂತ್ರ ಹಾಗೂ ಇತರೆ ಸಾಮಾಗ್ರಿಗಳು ನೀಡಲಾಗಿದೆ. ಈ ಪೈಕಿ ಒಟ್ಟು 85ಸಂಘಗಳ ಗಣಕೀಕರಣದಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಪ್ರಗತಿಯಲ್ಲಿದ್ದು 39 ಸಂಘಗಳ ಗಣಕೀಕರಣ ಪೂರ್ಣಗೊಂಡಿರುತ್ತದೆ.
ಸಹಕಾರ ಸಂಘಗಳ ಉಪನಿಬಂಧಕರಾದ ಆರ್.ಪವನಕುಮಾರ, ಜಂಟಿ ಕೃಷಿ ನಿರ್ದೇಶಕ ಪಿ.ರವಿ, ಸಹಕಾರ ಸಂಘಗಳ ಲೆಕ್ಕಪರಿಶೋಧಕ ಮಹಿಬೂಬ, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪೂರ, ಸಹಾಯಕ ನಿಬಂಧಕ ಸೀಮಾ ಫಾರೂಕಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಪಾಂಡುಗೌಡ ಪಾಟೀಲ್, ಕಲಬುರಗಿ ಡಿಸಿಸಿ ಬ್ಯಾಂಕ್ ಜನರಲ್ ಮ್ಯಾನೇಜರ್ ಮುತ್ತುರಾಜ್, ನಬಾರ್ಡ್ ಬ್ಯಾಂಕ್ ಡಿಡಿಎಂ ಲೋಹಿತ್ ಸೇರಿದಂತೆ ಸಮಿತಿಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿದ್ದರು.