ಮೈಸೂರು ಚಲೋ ಸಮಾರೋಪದಲ್ಲಿ ಲಕ್ಷಕ್ಕೂ ಹೆಚ್ಚು ಜನ ಭಾಗಿ

KannadaprabhaNewsNetwork | Published : Aug 9, 2024 12:32 AM

ಸಾರಾಂಶ

ಹೆಲಿಕ್ಯಾಪ್ಟರ್ ನಲ್ಲಿ ಬಂದು ಮುಡಾ ದಾಖಲೆ ಕದ್ದೊಯ್ದ ಭೈರತಿ ಸುರೇಶ್, ಕಾಂಗ್ರೆಸ್ ಸಮಾವೇಶಕ್ಕೆ ಜನರನ್ನು ಕರೆ ತರಲು ಅಧಿಕಾರಿಗಳಿಗೆ ಟಾರ್ಗೆಟ್.

ಕನ್ನಡಪ್ರಭ ವಾರ್ತೆ ನಂಜನಗೂಡು

ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಜನಾಕ್ರೋಶ ವ್ಯಕ್ತವಾಗಿದ್ದು, ಆ. 10 ರಂದು ಮೈಸೂರಿನಲ್ಲಿ ಆಯೋಜಿಸಿರುವ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪದಲ್ಲಿ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಜನರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂವಿಧಾನರಕ್ಷಣೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿ ನೆಪದಲ್ಲಿ ಪ. ಜಾತಿ ಮತ್ತು ಪಂಗಡದ ಜನರ ಶ್ರೇಯೋಭಿವೃದ್ಧಿಗೆ ಮೀಸಲಾದ ಎಸ್.ಸಿಪಿ ಹಾಗೂ ಟಿಎಸ್.ಪಿ ಯೋಜನೆಯ 28 ಸಾವಿರ ಕೋಟಿ ಅನುದಾನವನ್ನು ದುರ್ಬಳಕೆ ಮಾಡುವ ಮೂಲಕ ಸಂವಿಧಾನ ವಿರೋಧಿ ಕೃತ್ಯವನ್ನು ನಡೆಸಿದೆ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನವನ್ನು ಅನ್ಯರ ಖಾತೆಗಳಿಗೆ ವರ್ಗಾವಣೆ ಮಾಡಲು ಸರ್ಕಾರದ ಪ್ರಭಾವಿಗಳು ಸಹಕರಿಸಿದ್ದಾರೆ. ಜೊತೆಗೆ ತೆಲಂಗಾಣ ಚುನಾವಣೆಗೆ ಈ ಹಣವನ್ನು ಕೊಂಡೊಯ್ದಿದ್ದಾರೆ, ಇನ್ನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ಅಸ್ತಿತ್ವಕ್ಕೆ ತಂದಿದ್ದ ಸಿಎಂ ಸಿದ್ಧರಾಮಯ್ಯ ಅವರು ಈಗ ರಾಜ್ಯದಲ್ಲಿ ನಡೆದಿರುವ ಬಹುಕೋಟಿ ಹಗರಣದ ಭ್ರಷ್ಟಾಚಾರವನ್ನು ಮುಚ್ಚಿಡಲು ಜನಾಂದೋಲನ ಸಮಾವೇಶಗಳ ಆಯೋಜನೆಗೆ ಮುಂದಾಗಿದ್ದಾರೆ. ಕೋಟ್ಯಾಂತರ ರು. ಹಣ ವೆಚ್ಚ ಮಾಡಿ ಆಡಳಿತ ಯಂತ್ರವನ್ನು ಬಳಸಿಕೊಂಡು ಅಧಿಕಾರಿಗಳ ಮೂಲಕ ಸಮಾವೇಶಕ್ಕೆ ಜನರನ್ನು ಕರೆತರಲು ಟಾರ್ಗೆಟ್ ನೀಡಿ ಮೈಸೂರಿನಲ್ಲಿ ಸಮಾವೇಶ ನಡೆಸಲು ಮುಂದಾಗಿರುವ ಸಿದ್ಧರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಲಿಕ್ಯಾಪ್ಟರ್ ನಲ್ಲಿ ಬಂದು ಮುಡಾ ದಾಖಲೆ ಕದ್ದೊಯ್ದ ಸಚಿವ

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮುಡಾ ಹಗರಣವನ್ನು ಮುಚ್ಚಿ ಹಾಕುವ ಸಲುವಾಗಿ ತರಾತುರಿಯಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಮೈಸೂರಿಗೆ ಆಗಮಿಸಿ ಹಲವು ದಾಖಲೆಗಳನ್ನು ಕದ್ದೊಯ್ದಿದ್ದಾರೆ, ಹೀಗಾಗಿ ಜನರು ಈತ ಮಂತ್ರಿನಾ ಅಥವಾ ಕಳ್ಳನಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಸರ್ಕಾರದ ಮಂತ್ರಿ ದಾಖಲೆಗಳನ್ನೇ ಹೊತ್ತೊಯ್ದ ಬಳಿಕ ನ್ಯಾಯಾಂಗ ತನಿಖೆಗೆ ಸರ್ಕಾರ ಮುಂದಾಗಿದೆ, ಈಗ ಹಗರಣದ ದಾಖಲೆಗಳನ್ನು ಪಡೆಯೋದಾದರೂ ಹೇಗೆ ಎಂದು ಪ್ರಶ್ನಿಸಿದರು.

ತುಟಿ ಬಿಚ್ಚದ ಜಿಲ್ಲಾ ಉಸ್ತುವಾರಿ ಸಚಿವರು

ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ರಾಜ್ಯ ಸರ್ಕಾರ ಎಸ್.ಸಿಪಿ ಮತ್ತು ಟಿಎಸ್.ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ತುಟಿಯನ್ನೂ ಬಿಚ್ಚುತ್ತಿಲ್ಲ ಎಂದು ದೂರಿದರು.

75 ಕೊಠಡಿಗಳ ನಿರ್ಮಾಣ ಕಾಮಗಾರಿ ಮುಂದುವರೆಸಲಿ

ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮೂಲಭೂತ ಸೌಕರ್ಯ ಲಭ್ಯವಿಲ್ಲ ಎಂದು ಭಕ್ತರು ದೇವರಿಗೆ ಪತ್ರ ಬರೆದಿದ್ದಾರೆ,

ಈಗಲಾದರೂ ಎಚ್ಚೆತ್ತುಕೊಂಡು ಸ್ಥಳೀಯ ಶಾಸಕರು 75 ಕೊಠಡಿಗಳ ವಸತಿ ಗೃಹ ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಲಿ ಜೊತೆಗೆ ನೆನೆಗುದಿಗೆ ಬಿದ್ದಿರುವ ದೇಗುಲದ ಬೆಳ್ಳಿರಥ ಕಾಮಗಾರಿ ಪೂರ್ಣಗೊಳಿಸಬೇಕು, ಈಗಾಗಲೇ ನಂಜನಗೂಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಜಾರಿಯಾಗುತ್ತಿಲ್ಲ, ಪ್ರಗತಿಯಿಂದ ನಂಜನಗೂಡು ಕುಂಠೀತವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ಧರಾಜು, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬಾಲಚಂದ್ರು, ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ನಗರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯ ಮಹದೇವಪ್ರಸಾದ್, ಶ್ರೀನಿವಾಸರೆಡ್ಡಿ, ರಾಘವೇಂದ್ರ, ಶಿರಮಳ್ಳಿ ಮಹದೇವಸ್ವಾಮಿ ಇದ್ದರು.

Share this article