ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮೀಣ ಭಾಗದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಹಕಾರ ಸಂಘಗಳು ಸಹಕಾರಿಯಾಗಿವೆ ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಿಇಒ ವನಜಾಕ್ಷಿ ಅಭಿಪ್ರಾಯಪಟ್ಟರು.ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ, ಆರ್‌ಎಪಿಸಿಎಂಎಸ್ ಸಹಯೋಗದಲ್ಲಿ ಗುರುವಾರ ನಡೆದ 71ನೇ ಸಹಕಾರ ಸಪ್ತಾಹ-2024 ಸಪ್ತಾಹ ಧ್ಯೇಯ- ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬುತ್ತಿವೆ. ರೈತರಿಗೆ ಗೋದಾಮುಗಳನ್ನು ಕಟ್ಟಿಕೊಳ್ಳಲು ಶೇ.4ರಷ್ಟು ಬಡ್ಡಿಯಲ್ಲಿ ಸಾಲಸೌಲಭ್ಯ ನೀಡಿ ಪ್ರಾಮಾಣಿಕವಾಗಿ ಕಟ್ಟಿಕೊಟ್ಟರೆ ಶೇ.3 ರಷ್ಟು ಬಡ್ಡಿದರದಲ್ಲಿಯೂ ಬಹುಸಂಖ್ಯಾ ಸೇವಾ ಯೋಜನೆಯಡಿ ಸಾಲ ನೀಡಲಾಗುತ್ತಿದೆ. ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದರು.ಸರ್ಕಾರದಲ್ಲಿ ನೀಡುವ ಸೌಲಭ್ಯವನ್ನು ಸಕಾಲದಲ್ಲಿ ಬಳಸಿಕೊಳ್ಳುವುದು ಸಂಘಗಳಿಗೆ ಮುಖ್ಯವಾಗಬೇಕು. ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಗಣಕೀಕೃತ ವ್ಯವಸ್ಥೆ ಜಾರಿಗೊಳಿಸಿದೆ. ಜೊತೆಗೆ ನ್ಯಾಷನಲ್ ಡೆಟಾಬೇಸ್‌ನ್ನು ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಎಲ್ಲ ದತ್ತಾಂಶ ಒಂದೆಡೆ ಸಿಗುವ ಹಾಗೆ ಮಾಡುವುದೇ ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಸಹಕಾರ ಕ್ಷೇತ್ರದಿಂದ ರೈತರಿಗೆ ಹಲವು ಯೋಜನೆಗಳು ಸಿಗುತ್ತಿವೆ. ಗ್ರಾಮೀಣ ಭಾಗದ ರೈತರು ತಮ್ಮ ಆರ್ಥಿಕ ಸ್ವಾವಲಂಬನೆಗಾಗಿ ಸಹಕಾರ ಸಂಘಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು ಎಂದರು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿದರು. ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ಸಹಾಯಕ ಪ್ರಾಧ್ಯಾಪಕ ಎಂ.ಪುಟ್ಟಸ್ವಾಮಿಗೌಡ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿರ್ದೇಶಕ ಎಸ್.ಎಲ್.ಮೋಹನ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಕೆ. ಶಿವಕುಮಾರ್, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಅಧ್ಯಕ್ಷೆ ಎಚ್.ಸಿ.ಶಿವಲಿಂಗೇಗೌಡ, ಸಂಘದ ಬೇಲೂರು ಸೋಮಶೇಖರ್, ಬಿ.ಡಿ.ಪುರುಷೋತ್ತಮ್, ಹೇಮಲತಾ, ಕೆ.ಸಿ.ರವೀಂದ್ರ, ಅಂಜನಾ ಭಾಗವಹಿಸಿದ್ದರು.