ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ: ಒಪ್ಪಂದ

KannadaprabhaNewsNetwork | Published : Dec 13, 2024 12:46 AM

ಸಾರಾಂಶ

ಇಂಡಿಯಾ ಫಾರ್ ಐಎಎಸ್ ಸಂಸ್ಥೆ ಜತೆ ಉತ್ತರ ವಿವಿ ಒಪ್ಪಂದ ಮಾಡಿಕೊಂಡಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಚ್ಚಿಸುವ ಬೆಂಗಳೂರು ಉತ್ತರ ವಿವಿಯ ಎಲ್ಲ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಉಚಿತ ಕೋಚಿಂಗ್ ಸೌಲಭ್ಯ ಸಿಗಲಿದೆ. ‘ಇಂಡಿಯಾ ಫಾರ್ ಐಎಎಸ್’ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವಿವಿ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲು ನಡೆಸಿದ ಪ್ರಯತ್ನದಲ್ಲಿ ‘ಇಂಡಿಯಾ ಫಾರ್ ಐಎಎಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು.ತಾಲೂಕಿನ ಮಂಗಸಂದ್ರದ ಬೆಂಗಳೂರು ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಒಪ್ಪಂದಕ್ಕೆ ಕುಲಸಚಿವರಾದ ಪ್ರೊ.ಡಿ.ಕುಮುದಾ ಹಾಗೂ ‘ಇಂಡಿಯಾ ಫಾರ್ ಐಎಎಸ್’ ಸಂಸ್ಥೆಯ ಮುಖ್ಯಸ್ಥ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಸಹಿ ಹಾಕಿದ ಬಳಿಕ ಅವರು ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

ಈ ಒಪ್ಪಂದದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಚ್ಚಿಸುವ ಬೆಂಗಳೂರು ಉತ್ತರ ವಿವಿಯ ಎಲ್ಲ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಉಚಿತ ಕೋಚಿಂಗ್ ಸೌಲಭ್ಯ ಸಿಗಲಿದೆ. ‘ಇಂಡಿಯಾ ಫಾರ್ ಐಎಎಸ್’ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಿದ್ದು, ಕಲಿಕೆಗೆ ಅಗತ್ಯವಾದ ಪಠ್ಯವಸ್ತು, ಕಲಿಕಾ ಮೆಟಿರಿಯಲ್‌ ಅನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಿದೆ. ತಿಂಗಳಿಗೊಂದು ಪರೀಕ್ಷೆ ನಡೆಸಿ ಅದರಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳನ್ನು ಉಚಿತ ಕೋಚಿಂಗ್‌ಗೆ ಆಯ್ಕೆ ಮಾಡಿಕೊಂಡು ಉಚಿತ ತರಬೇತಿ ನೀಡಲಾಗುವುದು ಎಂದು ಹೇಳಿದರು.ಈ ಸಂಸ್ಥೆಯ ನೇತೃತ್ವವನ್ನು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಅವರೇ ವಹಿಸಿಕೊಂಡಿರುವುದರಿಂದ ಇಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು ಐಎಎಸ್ ಪಾಸಾಗಲು ನಡೆಸುವ ಅಧ್ಯಯನದ ಅರಿವು ಸಿಗಲಿದೆ. ಅನುಭವಿಯಾಗಿರುವ ಶ್ರೀನಿವಾಸ್ ಅವರು ಜಿಲ್ಲೆಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಮುಂದಾಗಿರುವುದಕ್ಕೆ ವಿವಿಯಿಂದ ಧನ್ಯವಾದ ತಿಳಿಸಿದರು.

ಉಚಿತ ಸೌಲಭ್ಯ ಬಳಸಿಕೊಳ್ಳಿ‘ಇಂಡಿಯಾ ಫಾರ್ ಐಎಎಸ್’ ಸಂಸ್ಥೆಯ ಮುಖ್ಯಸ್ಥರಾದ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಒಪ್ಪಂದಕ್ಕೆ ಸಹಿಹಾಕಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಆಶಯದೊಂದಿಗೆ ಈ ಪ್ರಯತ್ನ ನಡೆಸಿದ್ದು, ಕೋಲಾರ ಜಿಲ್ಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಮುಂದೆ ಬರಬೇಕು ಎಂದು ಕೋರಿದರು.ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ.ಡಿ.ಕುಮುದಾ ಮತ್ತಿತರರು ಹಾಜರಿದ್ದರು.

Share this article