ನೀರುಬಂಡಿ ಉತ್ಸವದೊಂದಿಗೆ ಕುಕ್ಕೆ ಜಾತ್ರೆ ಸಂಪನ್ನ

KannadaprabhaNewsNetwork | Published : Dec 13, 2024 12:46 AM

ಸಾರಾಂಶ

ದೇವಳದ ಆನೆ ಯಶಸ್ವಿಯು ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮವನ್ನು ಪಟ್ಟಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿ ಸಂಭ್ರಮಿಸಿ, ಭಕ್ತರಲ್ಲೂ ಸಂಭ್ರಮ ಇಮ್ಮಡಿಗೊಳಿಸಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿಧಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.

ಎಲ್ಲ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ ಆರಂಭವಾದರೆ ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗುತ್ತದೆ. ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಂಪನ್ನವಾಯಿತು. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವರ ಕೊಪ್ಪರಿಗೆ ಅನ್ನದ ಭೋಜನ ಪ್ರಸಾದ ಸ್ವೀಕರಿಸಿದರು. ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣದ ಸುತ್ತಲೂ ನೀರನ್ನು ಮಧ್ಯಾಹ್ನದ ನಂತರ ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಆರಂಭವಾಯಿತು. ನಂತರ ನೀರಿನಲ್ಲಿ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ಬಳಿಕ ವಿವಿಧ ಸಂಗೀತ ಸುತ್ತುಗಳ ಪಾಲಕಿ ಉತ್ಸವ ನೀರಿನಲ್ಲಿ ನಡೆಯಿತು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಈ ಉತ್ಸವವು ಬೇರೆ ಯಾವುದೇ ದೇವಳದಲ್ಲಿ ಕಾಣಸಿಗುವುದಿಲ್ಲ. ಈ ವಿಶಿಷ್ಠ ಉತ್ಸವವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಕೃತಾರ್ಥರಾದರು.ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ,ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ , ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ರವೀಂದ್ರನಾಥ ಶೆಟ್ಡಿ ಕೇನ್ಯ, ಮೋಹನರಾಂ ಸುಳ್ಳಿ, ಮಾಸ್ಟರ್‌ಪಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ಅಚ್ಚುತ್ತ ಗೌಡ ಆಲ್ಕಬೆ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಕೌಂಟೆಟ್ ರಾಜಲಕ್ಷ್ಮಿ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್, ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.

ಪುಟಾಣಿಗಳೊಂದಿಗೆ ನೀರಾಟವಾಡಿದ ಯಶಸ್ವಿ

ದೇವಳದ ಆನೆ ಯಶಸ್ವಿಯು ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮವನ್ನು ಪಟ್ಟಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿ ಸಂಭ್ರಮಿಸಿ, ಭಕ್ತರಲ್ಲೂ ಸಂಭ್ರಮ ಇಮ್ಮಡಿಗೊಳಿಸಿತು.

ಇಂದಿನಿಂದ ಸರ್ಪಸಂಸ್ಕಾರ ಸೇವೆ ಆರಂಭ ಶ್ರೀ ಕ್ಷೇತ್ರದ ಜಾತ್ರೆಯ ಅವಧಿಯಲ್ಲಿ ದೇವಳದ ವಿಶೇಷ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ನಡೆಯುವುದಿಲ್ಲ. ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಮುಕ್ತಾಯವಾಗಿರುವುದರಿಂದ ಇಂದಿನಿಂದ (ಡಿ.13) ಶುಕ್ರವಾರದಿಂದ ದೇವಳದ ಪ್ರಧಾನ ಸೇವೆಯಾದ ಸರ್ಪಸಂಸ್ಕಾರವು ಸೇವೆಯು ಪುನರಾರಂಭಗೊಂಡಿದೆ.

Share this article