ಕರಾವಳಿ: ಭಾರೀ ವರುಣಾರ್ಭಟಕ್ಕೆ ಜನಜೀವನ ತತ್ತರ

KannadaprabhaNewsNetwork |  
Published : May 26, 2025, 12:39 AM IST
ಕಾವೂರು ಅಂಬಿಕಾನಗರದಲ್ಲಿ ರಸ್ತೆಗಡ್ಡ ಬಿದ್ದ ಮರ. | Kannada Prabha

ಸಾರಾಂಶ

ಮುಂಗಾರು ಮಳೆಯ ಎರಡನೇ ದಿನವಾದ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಬಹುತೇಕ ನದಿಗಳ ಹರಿವಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ವಿವಿಧೆಡೆ ಮನೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ.

ಬಂಟ್ವಾಳದಲ್ಲಿ ಮನೆಗಳಿಗೆ ನುಗ್ಗಿದ ನೀರು, ಮನೆಗಳು । ಮಂಗಳೂರಲ್ಲಿ ಕೃತಕ ಪ್ರವಾಹ । ವಿವಿಧೆಡೆ ಹಾನಿ

ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ

ಮುಂಗಾರು ಮಳೆಯ ಎರಡನೇ ದಿನವಾದ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಬಹುತೇಕ ನದಿಗಳ ಹರಿವಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ವಿವಿಧೆಡೆ ಮನೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ 7 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಒಟ್ಟು 237 ವಿದ್ಯುತ್‌ ಕಂಬಗಳು ಜಖಂಗೊಂಡಿದ್ದು, 2 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ.

ಭಾನುವಾರ ಬೆಳಗ್ಗಿನಿಂದಲೇ ಭಾರೀ ಮಳೆ ಎಡೆಬಿಡದೆ ಸುರಿದಿದ್ದು, ಗಾಳಿಯ ಅಬ್ಬರವೂ ಜೋರಾಗಿತ್ತು. ಮಧ್ಯಾಹ್ನ ಕೆಲ ಕಾಲ ವಿರಾಮ ನೀಡಿದ್ದು ಬಿಟ್ಟರೆ ದಿನವಿಡಿ ಮಳೆ ಪ್ರತಾಪ ತೋರಿತ್ತು.

ವಿವಿಧೆಡೆ ಹಾನಿ:

ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಮನೆ ಮಂದಿ ತೀವ್ರ ತೊಂದರೆಗೆ ಒಳಗಾದರು. ತೆಂಕ ಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯ ಭಾರೀ ಗೋಡೆಗೆ ಅಳವಡಿಸಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ಗಳು ಕುಸಿದು ಪಕ್ಕದ ಮನೆಗಳು ಅಪಾಯಕ್ಕೆ ಸಿಲುಕಿವೆ. ಹೆದ್ದಾರಿ ಕಾಮಗಾರಿಯ ಕೆಸರು ನೀರಿನಿಂದ ಸ್ಥಳೀಯರು ಪಾಡುಪಡುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ನದಿ ಪ್ರವಾಹದಿಂದ ಹಲವು ತೋಟಗಳು ಜಲಾವೃತಗೊಂಡಿದ್ದವು.

ಕಡೇಶ್ವಾಲ್ಯ ಗ್ರಾಮದ ಕಲ್ಲಾಜೆ ಎಂಬಲ್ಲಿ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದಿದೆ. ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ ಸಮೀಪ ಸೈಂಟ್‌ ಆನ್ಸ್‌ ಶಾಲೆ ಹಿಂಭಾಗದ ಕಲ್ಲಿನ ಆವರಣ ಗೋಡೆ ಕುಸಿದು ರಸ್ತೆಗೆ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ಕಡಬದ ನೂಜಿಬಾಳ್ತಿಲದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿ ನಾಲ್ವರಿಗೆ ಗಾಯಗಳಾಗಿವೆ.

ಮಂಗಳೂರಿನ ಕೆಎಸ್ಸಾರ್ಟಿಸಿ- ಕುಂಟಿಕಾನ ರಸ್ತೆಯಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಹಾನಿಯಾಗಿದೆ. ಮಣ್ಣಗುಡ್ಡೆಯ ಇನ್‌ಲ್ಯಾಂಡ್‌ ಅಪಾರ್ಟ್‌ಮೆಂಟ್‌ ಬಳಿಯ ಮರ ಉರುಳಿ ರಸ್ತೆಗೆ ಬಿದ್ದಿತ್ತು. ಲೇಡಿಹಿಲ್‌, ಕಾವೂರು ಪ್ರದೇಶದಲ್ಲಿ ಹಲವು ವಿದ್ಯುತ್‌ ಕಂಬಗಳು ಉರುಳಿಬಿದ್ದಿವೆ. ಶಕ್ತಿನಗರ ಆರೋಗ್ಯ ಕೇಂದ್ರದ ಬಳಿ ಮರವೊಂದು ಬಿದ್ದು ನೀರಿನ ಟ್ಯಾಂಕ್‌ಗೆ ಹಾನಿ ಸಂಭವಿಸಿದೆ. ಆಡುಮರೋಳಿ ಎಂಬಲ್ಲಿ ಮಾರಿಕಾಂಬಾ ದೇವಾಲಯ ಬಳಿ ಗುಡ್ಡ ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ.

ರಸ್ತೆ ಮೇಲೆ ಕೃತಕ ಪ್ರವಾಹ:

ಮಂಗಳೂರು ನಗರಾದ್ಯಂತ ವಿವಿಧೆಡೆ ರಸ್ತೆ ಮೇಲೆ ಕೃತಕ ಪ್ರವಾಹ ತುಂಬಿ ಹರಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಜತೆಗೆ ಅಲ್ಲಲ್ಲಿ ಕಾಮಗಾರಿಗಾಗಿ ಅಗೆದು ಹಾಕಿದ ರಸ್ತೆಗಳಿಂದ ನಗರವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಪಂಪ್‌ವೆಲ್‌ನಲ್ಲಿ ಚರಂಡಿ ಉಕ್ಕೇರಿ ರಸ್ತೆ ಮೇಲೆ ನೀರು ಹರಿದು ಪ್ರತಿ ವರ್ಷದಂತೆ ಫ್ಲೈಓವರ್‌ ಕೆಳಭಾಗ ಜಲಾವೃತಗೊಂಡಿತ್ತು. ಅಲ್ಲದೆ, ಕುದ್ರೋಳಿ, ಕರಂಗಲ್ಪಾಡಿ, ಬಲ್ಮಠ, ಪಡೀಲ್‌ ಅಂಡರ್‌ಪಾಸ್‌ ಮತ್ತಿತರ ಕಡೆ ರಸ್ತೆ ಮೇಲೆ ಕೃತಕ ಪ್ರವಾಹ ಹರಿದಿತ್ತು. ಕಾವೂರು ಅಂಬಿಕಾನಗರದಲ್ಲಿ ರಸ್ತೆಗಡ್ಡಲಾಗಿ ಬೃಹತ್‌ ಮರ ಬಿದ್ದು ಸಂಚಾರ ವ್ಯತ್ಯಯವಾಗಿತ್ತು.

ನದಿಗಳ ಹರಿವು ಏರಿಕೆ:

ಜಿಲ್ಲೆಯ ಜೀವನದಿ ನೇತ್ರಾವತಿ ಸೇರಿದಂತೆ ಬಹುತೇಕ ನದಿಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ. ಮಳೆ ನಿರಂತರವಾಗಿ ಮುಂದುವರಿದರೆ ಪ್ರವಾಹದ ಸಾಧ್ಯತೆ ಕಂಡುಬಂದಿದೆ. ಭಾರೀ ಗಾಳಿ ಬೀಸುತ್ತಿರುವುದರಿಂದ ಕಡಲಬ್ಬರವೂ ಜೋರಾಗಿದ್ದು, ಕಡಲ್ಕೊರೆತದ ಆತಂಕ ಸ್ಥಳೀಯರನ್ನು ಕಾಡುತ್ತಿದೆ.ಪುತ್ತೂರಲ್ಲಿ ಅತ್ಯಧಿಕ ಮಳೆ:

ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗೆ ಪುತ್ತೂರು ತಾಲೂಕಿನಲ್ಲಿ ಅತ್ಯಧಿಕ 96.9 ಮಿಮೀ ಮಳೆ ದಾಖಲಾಗಿದ್ದರೆ, ಬೆಳ್ತಂಗಡಿಯಲ್ಲಿ 83.7 ಮಿಮೀ, ಬಂಟ್ವಾಳದಲ್ಲಿ 76.7 ಮಿಮೀ, ಮಂಗಳೂರು 41.6 ಮಿಮೀ, ಸುಳ್ಯ 63.2 ಮಿಮೀ, ಮೂಡುಬಿದಿರೆ 52.1 ಮಿಮೀ, ಕಡಬ 87.3 ಮಿಮೀ, ಮೂಲ್ಕಿಯಲ್ಲಿ 36 ಮಿಮೀ, ಉಳ್ಳಾಲದಲ್ಲಿ 68.1 ಮಿಮೀ. ಮಳೆಯಾಗಿದೆ.ಉಡುಪಿ ವರದಿ:

ಉಡುಪಿ ಜಿಲ್ಲಾದ್ಯಂತ ಭಾನುವಾರವೂ ಭಾರಿ ಮಳೆಯಾಗಿದೆ. ದಿನವಿಡೀ ಮೋಡ ಕವಿದಿದ್ದು, ನಡುನಡುವೆ ಬಲವಾದ ಗಾಳಿಯೊಂದಿಗೆ ಧಾರಾಕಾರ ಮಳೆಯಾಗಿದೆ. ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 76.10 ಮಿ.ಮೀ. ಮಳೆಯಾಗಿದೆ.ಅಲ್ಲದೇ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ಮನೆಗಳಿಗೆ 22 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 7.35 ಲಕ್ಷ ರು.ಗೂ ಹೆಚ್ಚು ನಷ್ಟ ಸಂಭವಿಸಿದೆ. ಗಾಳಿಯ ಪ್ರಮಾಣ ಎಷ್ಟಿತ್ತೆಂದರೆ 11 ಮನೆಗಳ ಮೇಲೆ ಮರಗಳು ಉರುಳಿ ಬಿದ್ದು ಸಾಕಷ್ಟು ಹಾನಿ ಸಂಭವಿಸಿದೆ. ಬೈಂದೂರು ತಾಲೂಕಿನಲ್ಲಿ ಸಿಡಿಲಿಗೆ ಮನೆಯೊಂದರ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿ 1 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ.ಕುಂದಾಪುರ ತಾಲೂಕಿನಲ್ಲಿ ಗಾಳಿಮಳೆಗೆ ಮರಗಳು ಉರುಳಿ, ಕರ್ಕುಂಜೆ ಗ್ರಾಮದ ಅಸ್ಮಾ ರಫಿಕ್ ಅವರ ಮನೆಗೆ 20,000 ರು., ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಗಂಗೆ ಮಹಾಲಿಂಗ ಅವರ ಮನೆಗೆ 5,000 ರು., ಸೇನಾಪುರ ಗ್ರಾಮದ ನಾಗವೇಣಿ ಸೀತಾರಾಮ ಶೆಟ್ಟಿ ಅವರ ಮನೆಗೆ 10,000 ರು., ಬೀಜಾಡಿ ಗ್ರಾಮದ ಗುಲಾಬಿ ಬಾಬು ಅವರ ಮನೆಗೆ 15,000 ರು., ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಅಶ್ವಿನಿ ಕರುಣಾಕರ ಅವರ ಮನೆಗೆ 50,000 ರು., ಯಳಜಿತ್ ಗ್ರಾಮದ ಪಾರ್ವತಿ ಮರಾಠಿ ಮನೆಗೆ 1,00,000 ರು. ನಷ್ಟವಾಗಿದೆ.ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ದೇವಕಿ ಮೊಯ್ಲಿ ಅವರ ಮನೆಗೆ 20,000 ರು., ಕಾಪು ತಾಲೂಕಿನ ಪಾದೂರು ಗ್ರಾಮದ ಜಯಂತಿ ಆಚಾರ್ಯ ಅವರ ಮನೆಗೆ 30,000 ರು., ಮಜೂರು ಗ್ರಾಮದ ಅಪ್ಪಿ ನಾಯ್ಕ್ ಅವರ ಮನೆಗೆ 25,000 ರು., ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಗಿರಿಜಾ ಗುರುವ ಮಡಿವಾಳ ಅವರ ಮನೆಗೆ 50,000 ರು., ಹಿರೇಬೆಟ್ಟು ಗ್ರಾಮದ ರಾಮ ನಾಯ್ಕ್ ಅವರ ಮನೆಗೆ 50,000 ರು.ಗಳಷ್ಟು ಹಾನಿಯಾಗಿವೆ.ಬೈಂದೂರು ತಾಲೂಕಿನ ಶಿರೂರು ಗ್ರಾಮದ ಗಿರಿಜಾ ಅವರ ಮನೆಗೆ ಸಿಡಿಲು ಬಡಿದು 1,00,000 ರು., ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಪ್ರೇಮ ರಮೇಶ್ ದೇವಾಡಿಗ ಅವರ ಮನೆಗೆ ಗಾಳಿ ಮಳೆಯಿಂದ 50,000 ರು., ಹಿರ್ಗಾನ ಗ್ರಾಮದ ಪವಿತ್ರ ಅಶೋಕ ಆಚಾರ್ಯ ಅವರ ಮನೆಗೆ 50,000 ರು., ಕಾರ್ಕಳದ ಸುಜಾತ ಶೆಟ್ಟಿ ಅವರ ಮನೆಗೆ 50,000 ರು., ಮಿಯಾರು ಗ್ರಾಮದ ಬೇಬಿ ಸಂಜೀವ ಅವರ ಮನೆಗೆ 10,000 ರು.ಗಳಷ್ಟು ಹಾನಿಯಾಗಿದೆ.ಕಾಪು ತಾಲೂಕಿನ ಕಳತ್ತೂರು ಗ್ರಾಮದ ಶ್ರೀನಿವಾಸ್ ಶೆಟ್ಟಿಗಾರ್ ಅವರ ಮನೆಗೆ 20,000 ರು., ಪೆರ್ಡೂರು ಗ್ರಾಮದ ಮುದ್ದು ನಾಯಕ್ ಅವರ ಮನೆಗೆ 15,000 ರು., ಕೊಡವೂರು ಗ್ರಾಮದ ಹರಿ ಶೆಟ್ಟಿಗಾರ್ ಅವರ ಮನೆಗೆ 10,000 ರು., ಮರ್ಣೆ ಗ್ರಾಮದ ರಮೇಶ್ ಪ್ರಭು ಅವರ ಮನೆಗೆ 30,000 ರು., ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಸಾವಿತ್ರಿ ಉದಯ್ ಖಾರ್ವಿ ಅವರ ಮನೆಗೆ 15,000 ರು., ಗಿರಿಜಾ ರಂಗ ಖಾರ್ವಿ ಅವರ ಮನೆಗೆ ಗಾಳಿ 15,000 ರು., ಗಳಷ್ಟು ಹಾನಿ ಸಂಭವಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ