;Resize=(412,232))
ದಾವಣಗೆರೆ : ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿವರೆಗೆ ಮುಂದುವರಿಯಲಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆಂದರೆ ನಮ್ಮ ಪಕ್ಷದ ಹೈಕಮಾಂಡ್ ಮಾಡಬೇಕು. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಬದಲಿಸೋದು ನಮ್ಮ ಪಕ್ಷದ ಆಂತರಿಕ ವಿಚಾರವಾಗಿದೆ. ನಾವೇನಾದರೂ ಮಾಡಿಕೊಳ್ಳುತ್ತೇವೆ. ಮೊದಲು ನಿಮ್ಮ ಪಕ್ಷದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸರಿ ಮಾಡಿಕೊಳ್ಳಿ. ಯತ್ನಾಳ್ ಕಾಟವನ್ನೇ ನಿಮ್ಮಿಂದ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ತಿರುಗೇಟು ನೀಡಿದರು. ನಿಮ್ಮ ಪಕ್ಷದ ಬಗ್ಗೆ ನಾವೇನಾದರೂ ಮಾತನಾಡುತ್ತೇವಾ?. ನಿಮ್ಮ ಪಕ್ಷದ ಬಗ್ಗೆ ನಾವು ಚಿಂತನೆ ಮಾಡುತ್ತಿದ್ದೇವಾ?. ನಮ್ಮ ಪಕ್ಷದ ಬಗ್ಗೆ ನೀವು ಯಾಕೆ ಅಷ್ಟೊಂದು ತಲೆ ಕೆಡಿಸಿಕೊಂಡಿದ್ದೀರಿ?. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಲಿ, ಸಂಪುಟ ವಿಸ್ತರಣೆಯಾಗಲಿ ಯಾವುದೂ ಇಲ್ಲ. ಬಿಜೆಪಿಯವರು ಅಂದುಕೊಂಡಂತೆ ಏನೂ ಇಲ್ಲ. ಅದೆಲ್ಲಾ ವಿಪಕ್ಷದವರ ಊಹಾಪೋಹವಷ್ಟೇ ಎಂದು ವಿಜಯೇಂದ್ರ ವಿರುದ್ಧ ಹರಿಹಾಯ್ದರು.
ನಮ್ಮ ವರಿಷ್ಠರು ತೀರ್ಮಾನ ಮಾಡಿ ಯಾವಾಗ ಬೇಕಿದ್ದರೂ, ಏನು ನಿರ್ಧಾರ ಬೇಕಾದರೂ ಮಾಡಬಹುದು. ಹೈಕಮಾಂಡ್ ನಿರ್ಧಾರಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ನಾವೆಲ್ಲಾ ಪಕ್ಷದ ಶಿಸ್ತಿನ ಸಿಪಾಯಿಗಳು. ನಮ್ಮ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ನಮ್ಮ ವರಿಷ್ಠರು, ಪಕ್ಷ ಹಾಕಿದ ಗೆರೆಯನ್ನು ನಾವ್ಯಾರೂ ದಾಟುವುದಿಲ್ಲ ಎಂದು ಅವರು ಹೇಳಿದರು. ತಮನ್ನಾ ಬದಲು ರಾಜ್ಯದವರಿಗೇ ಅವಕಾಶ ಕೊಡಬೇಕಿತ್ತು
ಮೈಸೂರು ಸ್ಯಾಂಡಲ್ ಸೋಪ್ಸ್ ಜಾಹೀರಾತಿಗೆ ನಮ್ಮ ರಾಜ್ಯದ ನಟಿಯರಿಗೆ ಅವಕಾಶ ನೀಡಬೇಕಿತ್ತು ಅನಿಸುತ್ತಿದೆ ಎಂದು ವಕ್ಫ್ ಖಾತೆ ಸಚಿವ, ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮನ್ನಾ ಬದಲು, ಸ್ಥಳೀಯರಿಗೆ ಅವಕಾಶ ಕೊಡಬೇಕಿತ್ತು ಎಂದು ಹೇಳಿದರು.
ಕರ್ನಾಟಕವನ್ನು ಹೊರತುಪಡಿಸಿ, ಆಚೆಯವರನ್ನು ಕರೆದುಕೊಂಡು ಬರುವ ಬದಲು, ನಮ್ಮ ರಾಜ್ಯದ ನಟಿಯರು, ಕಲಾವಿದರಿಗೆ ಅವಕಾಶ ನೀಡಬೇಕಿತ್ತು. ಕನ್ನಡದಲ್ಲಿ ಬಹಳಷ್ಟು ಪ್ರತಿಭಾವಂತ ನಟಿಯರು ಇದ್ದಾರೆ.ಇಲ್ಲಿನ ನಟಿಯರಿಗೆ ಅವಕಾಶ ನೀಡಬೇಕಿತ್ತು ಎಂಬುದು ನನ್ನ ಅಭಿಪ್ರಾಯ ಎನ್ನುವ ಮೂಲಕ ಮೈಸೂರು ಸ್ಯಾಂಡರ್ ಸೋಪ್ಸ್ ಉತ್ಪನ್ನಗಳಿಗೆ ನಟಿ ತಮನ್ನಾ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಸಚಿವ ಜಮೀರ್ ಬೇಸರ ವ್ಯಕ್ತಪಡಿಸಿದರು.ಈಗಾಗಲೇ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಈಗ ಆ ವಿಚಾರ ಅಪ್ತಸ್ತುತ ಎಂದು ಹೇಳಿದರು.
ತಮನ್ನಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆ ಮಾಡಲು ನೀವೇ ಮಧ್ಯಸ್ಥಿಕೆ ವಹಿಸಿದ್ದೀರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮೀರ್, ‘ಆ ಸಂದರ್ಭದಲ್ಲಿ ವಿಜಯೇಂದ್ರ ಅವರು ಎಲ್ಲೋ ನಮ್ಮ ಜೊತೆಯಲ್ಲಿ ಬಂದಿರಬಹುದು, ಅದಕ್ಕೆ ಹಾಗೆ ಹೇಳಿದ್ದಾರೆʼ ಎಂದು ಉತ್ತರಿಸಿದರು.