ಬೆಂಗಳೂರಲ್ಲಿ ಕಾಕ್ರೋಚ್‌ ಪಾರ್ಟಿ ಮೊದಲ ಪ್ರತಿಭಟನೆ

KannadaprabhaNewsNetwork |  
Published : Jun 15, 2026, 03:00 AM ISTUpdated : Jun 15, 2026, 11:27 AM IST
Cockroach

ಸಾರಾಂಶ

ದೇಶವನ್ನು ಸಮರ್ಥವಾಗಿ ಮುನ್ನಡೆಸಲು, ಭ್ರಷ್ಟಾಚಾರ ರಹಿತ, ಅಭಿವೃದ್ಧಿಪರ ಆಡಳಿತಕ್ಕಾಗಿ, ಅವ್ಯವಸ್ಥೆ ವಿರುದ್ಧ ಹೋರಾಡಲು ಯುವ ಸಮುದಾಯ ಸಜ್ಜಾಗಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

  ಬೆಂಗಳೂರು  :  ದೇಶವನ್ನು ಸಮರ್ಥವಾಗಿ ಮುನ್ನಡೆಸಲು, ಭ್ರಷ್ಟಾಚಾರ ರಹಿತ, ಅಭಿವೃದ್ಧಿಪರ ಆಡಳಿತಕ್ಕಾಗಿ, ಅವ್ಯವಸ್ಥೆ ವಿರುದ್ಧ ಹೋರಾಡಲು ಯುವ ಸಮುದಾಯ ಸಜ್ಜಾಗಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಪ್ರಧಾನಿ ಅತಿ ಹೆಚ್ಚು ಶಿಕ್ಷಿತರಾಗಿದ್ದಾರೆ. ಅವರು ‘ಸಂಪೂರ್ಣ ಪೊಲಿಟಿಕಲ್ ಸೈನ್ಸ್’ ಓದಿದ್ದಾರೆ ಮತ್ತು ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎಂದು ನೋಡಿದ್ದಾರೆ. ಶಿಕ್ಷಕರು ಹೇಗೆ ಕೆಲಸ ಮಾಡುತ್ತಾರೆ, ಪ್ರಶ್ನೆಪತ್ರಿಕೆ ಹೇಗೆ ಸೋರಿಕೆಯಾಗುತ್ತವೆ ಎಂದೂ ಗೊತ್ತಿದೆ. ಆದರೂ, ಪತ್ರಿಕೆ ಸೋರಿಕೆ ವಿಚಾರದಲ್ಲಿ ಏಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದರು.

ನಿವೃತ್ತರ ರಾಜಕೀಯವನ್ನು ಕಂಡು ಬೇಸತ್ತಿರುವ ಯುವಕರು, ‘ಅಂಕಲ್, ಆಂಟಿಗಳೇ ನಿಮ್ಮ ಆಡಳಿತ ಸಾಕು’ ಎಂದು ಹೇಳುತ್ತಿದ್ದಾರೆ. ಯುವ ಸಮುದಾಯಕ್ಕೆ ರಾಜಕೀಯದಲ್ಲಿ ಅವಕಾಶ ನೀಡಬೇಕು. ಯುವಕರೇ ಮುಂದಾಳತ್ವ ವಹಿಸಬೇಕು. ನಿವೃತ್ತರಾಗಿದ್ದರೂ ಅಧಿಕಾರದಲ್ಲಿರುವವರಿಗೆ ರಾಜಕೀಯ ನಿವೃತ್ತಿ ನೀಡಬೇಕು ಎಂದರು.

ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ. ಅದನ್ನು ಬದಲಿಸಲು ಯುವಕರೇ ಈ ದೇಶದ ಭವಿಷ್ಯ ಕಟ್ಟುತ್ತಾರೆ ಎನ್ನುವ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ. ನಾನು ಎಂದಿಗೂ ಯುವ ಸಮುದಾಯ, ನ್ಯಾಯದ ಪರ ಇರುತ್ತೇನೆ. ನಿಮ್ಮಿಂದಲೇ ಬದಲಾವಣೆ ಸಾಧ್ಯ. ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು. ಶಿಕ್ಷಣದ ಬಗ್ಗೆ ಸ್ಪಷ್ಟ ಉದ್ದೇಶ, ಗುರಿಗಳನ್ನು ಹೊಂದಿರುವ ಸೋನಮ್ ವಾಂಗ್ಚುಕ್‌ನಂಥವರು ದೇಶದ ಶಿಕ್ಷಣ ಸಚಿವರಾಗಬೇಕು. ಅವರು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲಿಸುತ್ತಿದ್ದಾರೆ ಎಂದು ಪ್ರಕಾಶ್ ರಾಜ್ ಹೇಳಿದರು.

ಪರಿಸರವಾದಿ ಸೋನಮ್ ವಾಂಗ್ಚುಕ್ ಮಾತನಾಡಿ ನಾವು ಇಲ್ಲಿ ರಾಜಕೀಯ ಮಾಡಲು, ಅಧಿಕಾರ, ಸ್ಥಾನಮಾನಕ್ಕಾಗಿ ಬಂದಿಲ್ಲ. ಯುವ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ಆಗಮಿಸಿದ್ದೇವೆ. ದೇಶದಲ್ಲಿ ಈಗ ವಿತ್ತೀಯ ಕೊರತೆಯಿಲ್ಲ, ನಂಬಿಕೆಯ ಕೊರತೆಯಿದೆ. ಹಾಳಾದ ಶಿಕ್ಷಣ ವ್ಯವಸ್ಥೆ ಸರಿಪಡಿಸುವ ಉದ್ದೇಶದ ಪ್ರತಿಭಟನೆ ಬೆಂಬಲಿಸಲು ಇಲ್ಲಿಗೆ ಬಂದಿದ್ದೇನೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ಆಗಬೇಕು ಎಂದರು.

ಕಾಕ್ರೋಚ್‌ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಸಿಜೆಪಿ ಪಕ್ಷದ ಧ್ವನಿ ಈ ದೇಶದ ಯುವ ಸಮುದಾಯದ ಧ್ವನಿಯಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರೆಸುತ್ತೇವೆ. ರಾಜೀನಾಮೆ ನೀಡುವವರೆಗೆ ಬಿಡುವುದಿಲ್ಲ ಎಂದರು.

ಮಳೆಯಲ್ಲಿ ಕೊಡೆ ಹಿಡಿದು ನೂರಾರು ಮಂದಿ ಭಾಗಿ:

ಭಾನುವಾರ ಸಂಜೆ ಭಾರೀ ಮಳೆ ನಡುವೆ ನೂರಾರು ಜನ ಕೊಡೆಗಳನ್ನು ಹಿಡಿದುಕೊಂಡು ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಪ್ರತಿಭಟನೆಯಲ್ಲಿ ಯುವಕರು, ವಯಸ್ಸಾದವರು ಸೇರಿ ಎಲ್ಲಾ ವರ್ಗದವರು ಭಾಗವಹಿಸಿದ್ದರು. ನಾಯಕರ ಮಾತುಗಳಿಗೆ ಚಪ್ಪಾಳೆ ತಟ್ಟಿ ಬೆಂಬಲಿಸಿದರು. ಪ್ರತಿಭಟನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 

ಪುನೀತ್ ಸಮಾಧಿಗೆ ನಮನ:

ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸುವ ಮುನ್ನ ಸಿಜೆಪಿ ಕಾರ್ಯಕರ್ತರು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಿಲ್ಲಲೇಬೇಕು. ಯುವಕರೇ ಈ ದೇಶದ ಭವಿಷ್ಯ. ಯುವಕರಿಂದಲೇ ಈ ದೇಶದಲ್ಲಿ ಏನಾದರೂ ಬದಲಾವಣೆ ಕಾಣಲು ಸಾಧ್ಯ. ನೀಟ್‌ನಂತಹ ಮಹತ್ವದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗುತ್ತಿವೆ. 27 ಮಕ್ಕಳು ಬಲಿಯಾಗಿದ್ದಾರೆ. ಮಕ್ಕಳ ಆತ್ಮಹತ್ಯೆಗೆ ಹೊಣೆ ಯಾರು? ಇನ್ನು ಎಷ್ಟು ಜನ ಬಲಿಯಾಗಬೇಕು? ಪ್ರಶ್ನೆ ಪತ್ರಿಕೆಯ ಅಕ್ರಮದ ಹೊಣೆ ಹೊತ್ತು ಶಿಕ್ಷಣ ಸಚಿವರು ರಾಜಿನಾಮೆ ನೀಡಲೇಬೇಕು ಎಂದು ಸೋನಮ್ ಆಗ್ರಹಿಸಿದರು.

ದೇಶದ ಬದಲಾವಣೆಗೆ ಯುವ ಸಮುದಾಯ ಕಂಕಣ ತೊಡಲೇಬೇಕು. ಪ್ರಕಾಶ್ ರಾಜ್ ಅವರು ಸಿನಿಮಾದಲ್ಲಿ ವಿಲನ್ ಆಗಿದ್ದವರು ಯುವ ಜನರಿಗೆ ಬೆಂಬಲ ಮಾಡುವ ಮೂಲಕ ಹೀರೋ ಆಗಿದ್ದಾರೆ ಎಂದು ಸೋನಮ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಾರ್... ನಾನ್ ನಿಮ್ ಅಭಿಮಾನಿ! - ಕುಡಿದ ಮತ್ತಲ್ಲಿ ಡಿಕೆಶಿ ಭೇಟಿಗೆ ಬಂದಿದ್ದ ವ್ಯಕ್ತಿಯಿಂದ ಪೊಲೀಸರಿಗೆ ಪೀಕಲಾಟ
ಯುವಜನತೆ ಡ್ರಗ್ಸ್‌ನಿಂದ ದೂರ ಇರಿ : ರಾಜ್ಯಪಾಲ