ತೆಂಗು: ಮಂಡ್ಯ ಜಿಲ್ಲೆಯ 3589 ಹೆಕ್ಟೇರ್‌ನಲ್ಲಿ ಕಪ್ಪು ತಲೆಹುಳು ಬಾಧೆ

KannadaprabhaNewsNetwork |  
Published : Oct 06, 2025, 01:00 AM IST
5ಕೆಎಂಎನ್‌ಡಿ-1 ಮತ್ತು 3ಕಪ್ಪುತಲೆ ಹುಳುವಿನಿಂದ ತೆಂಗಿನ ಗರಿ ಹಾಳಾಗಿರುವುದು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ತೆಂಗು ಬೆಳೆಗೆ ಕಪ್ಪು ತಲೆಹುಳು ಬಾಧೆ ಕಾಣಿಸಿಕೊಂಡಿದೆ. 3589 ಹೆಕ್ಟೇರ್‌ ಪ್ರದೇಶದಲ್ಲಿ ರೋಗ ಹರಡಿದ್ದು, ಮದ್ದೂರು ತಾಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯನ್ನು ಆವರಿಸಿದೆ. ಕಪ್ಪುತಲೆ ಹುಳು ತೆಂಗಿನ ಗರಿಯನ್ನೇ ತಿಂದುಹಾಕುವುದರಿಂದ ಸಾಕಷ್ಟು ಹಾನಿ ಉಂಟುಮಾಡುತ್ತದೆ. ಇದರಿಂದ ಶೇ.50ರಷ್ಟು ಇಳುವರಿ ಕುಸಿತಗೊಳ್ಳಲಿದೆ. ಇದರಿಂದ ತೆಂಗು ಬೆಳೆಗಾರರು ತೀವ್ರ ಆತಂಕ ಎದುರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ತೆಂಗು ಬೆಳೆಗೆ ಕಪ್ಪು ತಲೆಹುಳು ಬಾಧೆ ಕಾಣಿಸಿಕೊಂಡಿದೆ. 3589 ಹೆಕ್ಟೇರ್‌ ಪ್ರದೇಶದಲ್ಲಿ ರೋಗ ಹರಡಿದ್ದು, ಮದ್ದೂರು ತಾಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯನ್ನು ಆವರಿಸಿದೆ.

ಕಪ್ಪುತಲೆ ಹುಳು ತೆಂಗಿನ ಗರಿಯನ್ನೇ ತಿಂದುಹಾಕುವುದರಿಂದ ಸಾಕಷ್ಟು ಹಾನಿ ಉಂಟುಮಾಡುತ್ತದೆ. ಇದರಿಂದ ಶೇ.50ರಷ್ಟು ಇಳುವರಿ ಕುಸಿತಗೊಳ್ಳಲಿದೆ. ಇದರಿಂದ ತೆಂಗು ಬೆಳೆಗಾರರು ತೀವ್ರ ಆತಂಕ ಎದುರಿಸುತ್ತಿದ್ದಾರೆ.

ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನಲ್ಲಿ 723 ಹೆಕ್ಟೇರ್‌, ಮದ್ದೂರು ತಾಲೂಕಿನಲ್ಲಿ 1220 ಹೆಕ್ಟೇರ್‌, ಮಳವಳ್ಳಿ ತಾಲೂಕಿನಲ್ಲಿ 620 ಹೆಕ್ಟೇರ್‌, ಮಂಡ್ಯ ತಾಲೂಕಿನಲ್ಲಿ 171 ಹೆಕ್ಟೇರ್‌, ನಾಗಮಂಗಲ ತಾಲೂಕಿನಲ್ಲಿ 40 ಹೆಕ್ಟೇರ್‌, ಪಾಂಡವಪುರ ತಾಲೂಕಿನಲ್ಲಿ 665 ಹೆಕ್ಟೇರ್‌ ಹಾಗೂ ಶ್ರೀರಂಗಪಟ್ಟಣ ತಾಲೂಕಿನ 150 ಹೆಕ್ಟೇರ್‌ನಲ್ಲಿ ಕಪ್ಪು ತಲೆ ಹುಳು ರೋಗ ಕಾಣಿಸಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಕಪ್ಪುತಲೆ ಹುಳು ತೆಂಗು ಬೆಳೆಯುವ ಕರಾವಳಿ ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ತೆಂಗು ಬೆಳೆಗಳಿಗೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತಿದೆ. ಮರಿ ಹುಳ ಎಲೆಗಳ ತಳಭಾಗದಲ್ಲಿ ತನ್ನ ಹಿಕ್ಕೆ ಹಾಗೂ ನೂಲಿನಿಂದ ನಿರ್ಮಿಸಿದ ಸುರಂಗಗಳಲ್ಲಿ ವಾಸಿಸುತ್ತಾ ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಇದರಿಂದ ಹಾನಿ ಹೆಚ್ಚಾದಾಗ ಮರಗಳು ಸುಟ್ಟಂತೆ ಕಂಡುಬರುತ್ತವೆ. ಸಾಮಾನ್ಯವಾಗಿ ವರ್ಷಕ್ಕೆ 5 ಸಂತತಿಗಳನ್ನು ಪೂರ್ಣಗೊಳಿಸುವ ಈ ಹುಳದ ಹತೋಟಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಶೇ.60 ರಷ್ಟು ಇಳುವರಿಯಲ್ಲಿ ಕುಂಠಿತವನ್ನು ಕಾಣಬಹುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಕೆ.ಎನ್‌.ರೂಪಶ್ರೀ ತಿಳಿಸಿದ್ದಾರೆ.

ಕಪ್ಪು ತಲೆ ಹುಳುವಿನ ಬಾಧೆ ಆರಂಭದ ಹಂತದಲ್ಲಿರುವಾಗಲೇ ಹತೋಟಿಗೆ ತರಬೇಕು. ಕೆಲವೇ ಗರಿಗಳಲ್ಲಿ ಕಂಡುಬಂದಾಗ ತೋಟದಲ್ಲಿ ಬಿದ್ದ ಗರಿಗಳು, ಇತರೆ ಕಸಕಡ್ಡಿಗಳನ್ನು ಸಂಗ್ರಹಿಸಿ ಸ್ವಚ್ಛವಾಗಿಡಬೇಕು. ಕೀಟದ ಆಕ್ರಮಣ ಸೂಚನೆ ಕಂಡ ಕೂಡಲೇ ಹುಳದ ಬಲೆ ಇರುವ ಗರಿ, ಅದರ ಭಾಗಗಳನ್ನು ಕತ್ತರಿಸಿ ಸುಟ್ಟುಹಾಕಬೇಕು. ಹಾನಿ ಹೆಚ್ಚಾದಾಗ ಹಾನಿಯಾದ ಎಲ್ಲಾ ಗರಿಗಳನ್ನು ಕತ್ತರಿಸಿ ತೆಗೆಯಬಾರದು ಎಂದು ಸೂಚಿಸಿದ್ದಾರೆ.

ಕೀಟಬಾಧೆಯ ತೀವ್ರತೆ ಆರಂಭದ ಹಂತದಲ್ಲೇ ಇದ್ದರೆ ಪ್ರಯೋಗಶಾಲೆಗಳಿಂದ ಗೋನಿಯೋಜಸ್‌ ನೆಫಾಂಟಿಡಿಸ್‌ ಪರೋಪಜೀವಿಗಳನ್ನು ಪಡೆದು ಬಿಡುಗಡೆ ಮಾಡುವುದು. ಪ್ರತಿ ಕೀಟಬಾಧಿತ ಮರಕ್ಕೆ ಸುಮಾರು 15 ರಿಂದ 20ರಂತೆ 15 ದಿನಗಳಿಗೊಮ್ಮೆ ನಾಲ್ಕು ಬಾರಿ ಬಿಡುಗಡೆ ಮಾಡುವಂತೆ ಸಲಹೆ ನೀಡಲಾಗಿದೆ.

ಪರೋಪಜೀವಿಗಳು ಮರಿಹುಳುಗಳ ಮೇಲೆ ತನ್ನ ಮೊಟ್ಟೆಗಳನ್ನು ಇರಿಸಲು ಮರಿಹುಳುಗಳನ್ನು ಹುಡುಕಿ ಅವುಗಳನ್ನು ಚುಚ್ಚಿ ನಿಷ್ಕ್ರೀಯಗೊಳಿಸುತ್ತವೆ. ಕಪ್ಪು ತಲೆ ಹುಳುವಿನ ಮೊಟ್ಟೆಗಳ ಹತೋಟಿಗಾಗಿ ಆಂಥೋಕೋರಿಡ್‌ ಬಗ್‌ ಪರಭಕ್ಷಕಗಳನ್ನು ಬಿಡುಗಡೆಗೊಳಿಸುವಂತೆ ರೈತರಿಗೆ ತಿಳಿಸಲಾಗಿದೆ.ತೆಂಗಿಗೆ ಚಿನ್ನದ ಬೆಲೆ

ತೆಂಗಿಗೆ ಈಗ ಚಿನ್ನದ ಬೆಲೆ ಬಂದಿದೆ. ಎಳನೀರಿನಿಂದ ಆರಂಭವಾಗಿ ಕೊಬ್ಬರಿಯವರೆಗೂ ಉತ್ತಮ ಬೆಲೆ ರೈತರಿಗೆ ದೊರಕುತ್ತಿದೆ. ಪ್ರತಿ ಎಳನೀರು 25 ರಿಂದ 30 ರು., ಪ್ರತಿ ತೆಂಗಿನ ಕಾಯಿ 60 ರು., ಕೊಬ್ಬರಿ ಕ್ವಿಂಟಲ್‌ಗೆ 28 ಸಾವಿರ ರು.ನಿಂದ 30 ಸಾವಿರ ರು.ವರೆಗೆ ಮಾರಾಟವಾಗುತ್ತಿದೆ. ತೆಂಗಿನ ಕಾಯಿಯ ಪ್ರತಿ ಕಂಟ 3 ರು. ಇದೆ. ಇಂತಹ ಸಮಯದಲ್ಲಿ ಕಪ್ಪು ತಲೆ ಹುಳುವಿನ ಬಾಧೆ ಆವರಿಸಿ ಇಳುವರಿ ಕುಸಿತಗೊಳಿಸುತ್ತಿರುವುದು ರೈತರನ್ನು ನಷ್ಟಕ್ಕೆ ಗುರಿಪಡಿಸಿದೆ.

ಕಪ್ಪು ತಲೆ ಹುಳುವಿನ ಬಾಧೆಯಿಂದ ಇಳುವರಿ ಕುಸಿತದ ಜೊತೆಗೆ ಗುಣಮಟ್ಟದ ಕಾಯಿ ಕೂಡ ಬೆಳವಣಿಗೆ ಕಾಣುವುದಿಲ್ಲ. ಸಣ್ಣ ಗಾತ್ರದ ಕಾಯಿಯಾಗುತ್ತದೆ. ತೂಕವೂ ಕಡಿಮೆಯಾಗುತ್ತದೆ. ಉತ್ತಮ ಬೆಲೆ ಸಿಗುವುದಿಲ್ಲ. ಕೊಬ್ಬರಿಗೆ ಹಾಕಿದರೂ ತೂಕ ಮತ್ತು ಗಾತ್ರವಿರುವುದಿಲ್ಲ. ಇವೆಲ್ಲವೂ ರೈತರಿಗೆ ನಷ್ಟವನ್ನು ಉಂಟುಮಾಡುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ