ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪರಿಸರ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಆದ್ಯತೆಯಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ರೈತ ಸಂಘದ ವತಿಯಿಂದ ನಡೆಯುತ್ತಿರುವ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ದದ ಹೋರಾಟದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ದ ಪಕ್ಷಾತೀತ ಹೋರಾಟ ನಡೆಯುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.ಶರಾವತಿ ಪಂಪ್ಡ್ ಸ್ಟೋರೇಜ್‌ನಿಂದ ಆ ಭಾಗದ ಪರಿಸರ, ಸಿಂಗಳೀಕ ಬಾಲದ ಮಂಗಗಳು, ಜೀವವೈವಿಧ್ಯಕ್ಕೆ ಹಾನಿಯಾಗುತ್ತಿರುವುದರ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರು, ಇಲಾಖೆ ಜೊತೆ ಮಾತನಾಡುತ್ತೇನೆ. ನಾನು ಮತ್ತು ಕೆನರಾ ಕ್ಷೇತ್ರದ ಸಂಸದರು ಜಂಟಿಯಾಗಿ ಯೋಜನೆಗೆ ಪರವಾನಿಗೆ ಸಿಗದಂತೆ ಪ್ರಯತ್ನ ನಡೆಸುತ್ತೇನೆ. ಯೋಜನೆ ನಿಲ್ಲಿಸಲು ಏನೇನು ಬೇಕು ಆ ಎಲ್ಲಾ ಪ್ರಯತ್ನ ಮಾಡುತ್ತೇನೆ. ಪಂಪ್ಡ್ ಸ್ಟೋರೇಜ್ ಬಿಟ್ಟು ಪರ್ಯಾಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಕೆ.ಆರ್.ಎಸ್. ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಯೋಜನೆ ಕಾರ್ಯಸಾಧುವಲ್ಲ. ವೈಜ್ಞಾನಿಕವಾಗಿ ಇದು ಸಾಧ್ಯವೇ ಇಲ್ಲ ಎನ್ನುವುದು ತಜ್ಞರು ಹೇಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಯೋಜನೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ತಕ್ಷಣ ರಾಜ್ಯ ಸರ್ಕಾರ ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ರಮೇಶ್ ಕೆಳದಿ, ಅಖಿಲೇಶ್ ಚಿಪ್ಳಿ, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಸುವರ್ಣ ಟೀಕಪ್ಪ ಇನ್ನಿತರರು ಹಾಜರಿದ್ದರು.