ಬಂಗಾರಪೇಟೆ: ಇದೇ ತಿಂಗಳು ೧೨ರಂದು ನಡೆಯಲಿರುವ ಟಿಎಪಿಸಿಎಂಎಸ್ ಚುನಾವಣೆಯನ್ನು ಎನ್‌ಡಿಎ ಮೈತ್ರಿಕೂಟ ಪ್ರತಿಷ್ಠೆಯಾಗಿ ಸ್ವೀಕರಿಸಿ ಚುನಾವಣೆ ಎದುರಿಸಲು ಸಿದ್ಧವಾಗಿದ್ದು ೧೨ ಸ್ಥಾನಗಳನ್ನೂ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು.
ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಭಾನುವಾರ ಬಿ ವರ್ಗದ ೮ ಅಭ್ಯರ್ಥಿಗಳು ಹಾಗೂ ಎ ವರ್ಗಕ್ಕೆ 4 ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮಾತನಾಡಿದ ಅವರು, ಈ ಹಿಂದೆ ಟಿಎಪಿಸಿಎಂಎಸ್ ಆಡಳಿತ ಮಂಡಳಿ ನಮ್ಮ ವಶದಲ್ಲೇ ಇತ್ತು, ೨೦೦೫ರಲ್ಲಿ ಆಡಳಿತ ಮಂಡಳಿ ದಿವಾಳಿಯಾಗಿದ್ದಾಗ ಅದಕ್ಕೆ ಮರು ಜೀವ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ, ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ, ರೈತರ ಅನುಕೂಲಕ್ಕಾಗಿ 1.50 ಕೋಟಿ ರು. ವೆಚ್ಚದಲ್ಲಿ ವಾಣಿಜ್ಯ ಸಂಕಿರಣಗಳನ್ನು ನಿರ್ಮಿಸಿ ಸಂಸ್ಥೆಗೆ ಲಾಭ ಬರುವಂತೆ ಶ್ರಮಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಸಂಸ್ಥೆಗೆ ಯಾವುದೇ ಕೊಡುಗೆ ನೀಡಿಲ್ಲ, ಆದ್ದರಿಂದ ರೈತರು ಮತ್ತೆ ಎನ್‌ಡಿಎ ಕೈಗೆ ಆಡಳಿತ ಮಂಡಳಿಯನ್ನು ನೀಡಿದರೆ ರೈತರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಮುಖ ನೋಡಿ ರೈತರು ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳ ಪರ ನಿಲ್ಲುವುದು ಖಚಿತ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಡೆದ ಜಿಲ್ಲಾ ಸಹಕಾರಿ ಯೂನಿಯನ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಿರುವುದು, ಆದ್ದರಿಂದ ಮತದಾರರು ಆಡಳಿತ ಪಕ್ಷದ ಬೆಂಬಲಿತರ ಆಸೆ, ಆಮಿಷಗಳಿಗೆ ಮರುಳಾಗದೇ ರೈತರ ಸಂಸ್ಥೆಯನ್ನು ಉಳಿ ಬೆಳೆಸಿದವರನ್ನು ನೆನೆದು ಅವರ ಕೈಗೆ ಆಡಳಿತ ನೀಡಿದರೆ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದರಲ್ಲಿ ಅನುಮಾನವಿಲ್ಲ ಎಂದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಾರ್ಕಂಡೇಗೌಡ, ಬಾಲಚಂದ್ರ, ಎಚ್.ಆರ್.ಶ್ರೀನಿವಾಸ್, ಸೀತಾರಾಮಪ್ಪ, ಸತೀಶ್ ಗೌಡ, ರಾಮಪ್ಪ, ಯೂನಿಯನ್ ನಿರ್ದೇಶಕರಾದ ಹನುಮಂತು, ಮಂಜುನಾಥ್, ಹಯನ್ಕುಂದ ವೆಂಕಟೇಶ್, ಚೌಡಪ್ಪ, ದೇವರಾಜ್ ಇತರರು ಇದ್ದರು.