ಉಡುಪಿ: ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಜ. 12ರಂದು ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಮತ್ತು ತೋಟಗಾರಿಕೆ ಹಾಗೂ ಕಿಸಾನ್ ಸಂಘದ ಸಹಭಾಗಿತ್ವದಲ್ಲಿ ನಡೆಯುವ ಜಿಲ್ಲಾ ಮಟ್ಟದ ತೆಂಗು ಬೆಳೆ ಅಭಿವೃದ್ಧಿ ಬಗ್ಗೆ ಕಾರ್ಯಾಗಾರದ ಪೂರ್ವಭಾವಿ ಸಭೆಯು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಚೇರಿಯಲ್ಲಿ ಜರುಗಿತು.
ಬೆಳಗ್ಗೆ 9 ಗಂಟೆಗೆ ತೆಂಗು ಉತ್ಪನ್ನಗಳ ಪ್ರದರ್ಶನ, ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ವಿಜ್ಞಾನಿ ಡಾ. ವಿನಾಯಕ್ ಹೆಗ್ಡೆ ಅವರಿಂದ ತೆಂಗು ಬೆಳೆಯಲ್ಲಿ ಕೀಟ ಮತ್ತು ರೋಗಬಾಧೆಯ ಸಮಗ್ರ ನಿರ್ವಹಣೆ ಬಗ್ಗೆ ಉಪನ್ಯಾಸವಿದ್ದು, 12.30ರಿಂದ ವಿಜ್ಞಾನಿ ಡಾ. ಚೈತನ್ಯ ಎಚ್.ಎಸ್ ಅವರು ತೆಂಗು ಬೆಳೆ ಉತ್ಪಾದನೆ ಹಾಗೂ ಮಿಶ್ರ ಬೆಳೆಗಳ ಮಾಹಿತಿ ನೀಡುವರು. ಮಧ್ಯಾಹ್ನ 2.30ಕ್ಕೆ ತೆಂಗು ಬೆಳೆಯಲ್ಲಿ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಮತ್ತು ಮಾರುಕಟ್ಟೆ ಬಲವರ್ಧನೆಗಿರುವ ಅವಕಾಶ ಕುರಿತು ಕಾಸರಗೋಡು ಸಿಪಿಸಿಆರ್ ಐನ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್ರು ಅವರು ಮಾಹಿತಿ ನೀಡುವರು. 3.30ರಿಂದ 4.30ರವರೆಗೆ ಶಿಬಿರಾರ್ಥಿಗಳಿಗೆ ಪ್ರಶ್ನೋತ್ತರ ನಡೆಯಲಿದ್ದು, ನಂತರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ವಿವಿಧ ರೈತ ಸಂಘಗಳ ಸದಸ್ಯರು, ಕೃಷಿಕರು ವಿವಿಧ ತೆಂಗು ಬೆಳೆಗಾರರ ಸಂಘಗಳ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ. ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ. ಧನಂಜಯ್ ಹಾಗೂ ತೋಟಗಾರಿಕೆ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.