ಮಂಗಳೂರು: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದವರನ್ನು ಒಕ್ಕಲೆಬ್ಬಿಸಿ ಈಗ ಮರು ವಸತಿ ಕಲ್ಪಿಸಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ. ರಾಜ್ಯದಲ್ಲಿ ಅನೇಕ ಮಂದಿ ಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಇರುವಾಗ ಸರ್ಕಾರ ಕೇರಳ ಸರ್ಕಾರದ ಒತ್ತಡಕ್ಕೆ ಮಣಿದು ವಲಸಿಗರಿಗೆ ಮನೆ ನಿರ್ಮಿಸಲು ಹೊರಟಿದೆ. ಅಲ್ಲಿ ಅಕ್ರಮ ನೆಲೆಸಲು ಕಾರಣವಾದ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಸತ್ಯಾಂಶ ಬಯಲಿಗೆಳೆಯಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.ಇಲ್ಲಿನ ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಡಾವಣೆಯಲ್ಲಿ ಅಕ್ರಮವಾಗಿ ಟೆಂಟ್ ಅಳವಡಿಸಿ ಕೂತವರಿಗೆ ಉಚಿತವಾಗಿ ಮನೆ ಕಟ್ಟಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದಿದೆ. ಕೇರಳದ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ರಾಜ್ಯದಲ್ಲಿ ಈ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಬಡವರಿಗೆ ಸರ್ಕಾರ ಒಂದೂ ಮನೆ ಕಟ್ಟಿಸಿಕೊಟ್ಟಿಲ್ಲ. ಹೀಗಿರುವಾಗ ಹೊರ ರಾಜ್ಯದ ವಲಸಿಗರಿಗೆ ಮನೆ ಕಟ್ಟಿಸಿಕೊಡುವ ಔಚಿತ್ಯವೇನಿದೆ ಎಂದು ಪ್ರಶ್ನಿಸಿದ ಅವರು, ಈ ಬೆಳವಣಿಗೆಯ ಹಿಂದೆ ಸಚಿವ ಜಮೀರ್ ಅಹ್ಮದ್ ಅವರ ಕೈವಾಡವಿದೆ ಎಂದು ಆರೋಪ ಮಾಡಿದರು.ಕೋಗಿಲು ಬಡಾವಣೆಯಲ್ಲಿ 2023ರ ಬಳಿಕ ವಲಸಿಗರ ಸಂಖ್ಯೆ ಹೆಚ್ಚಾಗಿದೆ. 2023ರ ಹಿಂದೆ ಗೂಗಲ್ ಮ್ಯಾಪ್ ನೋಡಿದಾಗ ಈ ವಿಚಾರ ಬೆಳಕಿಗೆ ಬರುತ್ತದೆ. ಸದ್ಯ ಅಲ್ಲಿನ ಎಲ್ಲ ಜಾಗವನ್ನು ಒತ್ತುವರಿ ಮಾಡಿದ್ದು, ಇದರ ಹಿಂದೆ ಪಿತೂರಿ ಅಡಗಿದೆ. ಹಾಗಾಗಿ ಸಮಗ್ರ ತನಿಖೆಗೆ ಒತ್ತಾಯಿಸಲಾಗಿದೆ ಎಂದರು.ಮುಸ್ಲಿಂ ಮತ ಬೇಟೆಗಾಗಿ ರಾಜ್ಯ ಸರ್ಕಾರ ಇಂತಹ ಕೆಲಸಕ್ಕಿಳಿದಿದೆ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಮೀರ್ ಅಹಮ್ಮದ್ ಅವರ ಜಮೀನಿನಲ್ಲಿ ನಾವು ಒತ್ತುವರಿ ಮಾಡಿದರೆ, ಸರ್ಕಾರ ನಮಗೆ ಮನೆ ಕಟ್ಟಿಸಿಕೊಡುತ್ತದೆಯೇ? ಎಂದು ಅವರು ಪ್ರಶ್ನೆ ಮಾಡಿದರು.