ಯಲಬುರ್ಗಾ: ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಗ್ರಾಹಕರು ತಮ್ಮ ಹಕ್ಕು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಬೇಕು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ಸೋಮಶೇಖರ ಬಿರಾದಾರ ಹೇಳಿದರು.
ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಯುವುದು ಅವಶ್ಯವಾಗಿದೆ. ಖರೀದಿದಾರನ ಯೋಗಕ್ಷೇಮದ ದೃಷ್ಟಿಯಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಅರಿಯುವುದು ಉತ್ತಮ. ಗ್ರಾಹಕರ ರಕ್ಷಣೆ ಸಮಾಜದ ಧ್ವನಿಯಾದಾಗ ಮಾತ್ರ ಗ್ರಾಹಕರ ಸಂರಕ್ಷಣೆ ಸಾಧ್ಯ ಎಂದರು.
ಉತ್ಪನ್ನ ಖರೀದಿಸುವಾಗ ಹೆಚ್ಚಿನ ಲಾಭದ ಸಲುವಾಗಿ ಕೆಲ ಮಾರಾಟಗಾರರು ಅಧಿಕ ಶುಲ್ಕ ವಿಧಿಸಿ ಗ್ರಾಹಕರಿಗೆ ವಂಚಿಸುವುದು ಕಂಡು ಬರುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು? ಅಲ್ಲದೆ ಬೇರೆ ಬೇರೆ ವಿಷಯ ತಿಳಿಯುವುದು ಜನಜಾಗೃತಿಗಾಗಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಾಜು ಮೇತ್ರಿ ಮಾತನಾಡಿ, ಸಾಲ ಕೊಡಿಸುವ ವಿಚಾರದಲ್ಲಿಯೂ ಕೂಡ ವಂಚಕರು ಆಮಿಷ ತೋರಿಸುತ್ತಾರೆ. ಬಳಿಕ ಮೊಬೈಲ್ ಅಥವಾ ಇಮೇಲ್‍ಗಳ ಮೂಲಕ ಬ್ಯಾಂಕ್ ಹಾಗೂ ದಾಖಲೆ ವಿವರ ಪಡೆದು ವಂಚಿಸುತ್ತಾರೆ. ಇದರಿಂದ ಎಚ್ಚರಿಕೆ ವಹಿಸಬೇಕು ಎಂದರು.
ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ನ್ಯಾಯವಾದಿ ಸಾವಿತ್ರಿ ಮುಜುಮದಾರ ಮಾತನಾಡಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಜೆ.ಇ. ಸೌಭಾಗ್ಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಆಹಾರ ಇಲಾಖೆ ಶಿರಸ್ತೇದಾರ್ ಮಲ್ಲಿಕಾರ್ಜುನ ಶಾಸ್ತ್ರಿಮಠ, ನಿರೀಕ್ಷಕ ಹನುಮಗೌಡ ಪಾಟೀಲ್, ದತ್ತಪ್ಪಯ್ಯ ಅಕ್ಕಿ ಸೇರಿದಂತೆ ಮತ್ತಿತರರು ಇದ್ದರು.