ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಕುರಿತು ಸಭೆ
ರಾಜ್ಯದ ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜ.10ರಂದು ಮಂಗಳೂರಿನಲ್ಲಿ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ 3 ಜಿಲ್ಲೆಗಳು ಎಲ್ಲಾ ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಉದ್ದಿಮೆದಾರರು ಭಾಗವಹಿಸಿ, ಪಕ್ಷಾತೀತವಾಗಿ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಚರ್ಚಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡಿ ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯದಲ್ಲಿ ಗೋವಾದ ಗಡಿಯಿಂದ ಮಂಗಳೂರಿನ ಗಡಿಯವರೆಗೆ 344 ಕಿಮೀ ಕಡಲತೀರವಿದ್ದು, ಇಲ್ಲಿನ ಜನತೆ ಉದ್ಯೋಗ ಅರಸಿ, ಇತರೆ ಜಿಲ್ಲೆ, ರಾಜ್ಯಗಳಿಗೆ ತೆರಳದೇ ಅವರಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ಮೂಲಕ ಇಲ್ಲಿಯೇ ಉದ್ಯೋಗ ಸೃಷ್ಟಿಸಿ, ಆದಾಯದ ಮೂಲಗಳನ್ನು ಸೃಷ್ಠಿಸುವ ಮೂಲಕ ಜಿಲ್ಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನೀತಿ ರಚಿಸಲಾಗುತ್ತಿದೆ ಎಂದರು.ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇರಳ ಮತ್ತು ಗೋವಾ ಮಾದರಿಯಲ್ಲಿ ಸಿಆರ್‌ಝಡ್ ನಿಯಮಗಳಲ್ಲಿ ರಿಯಾಯತಿ ನೀಡುವ ಕುರಿತಂತೆ ಈ ಸಭೆಯಲ್ಲಿ ಚರ್ಚಿಸಿ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ರಿಯಾಯತಿ ಕೋರಿ ಪತ್ರ ಬರೆಯಲಾಗುವುದು, ಈ ಸಭೆಗೆ 3 ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಗೋವಾ ಪ್ರವಾಸೋದ್ಯಮ ಸಚಿವರನ್ನೂ ಕೂಡಾ ಆಹ್ವಾನಿಸಲಾಗಿದೆ ಎಂದರು.ಕರಾವಳಿ ಪ್ರದೇಶದಲ್ಲಿನ ಪರಿಸರ, ಮೀನುಗಾರಿಕೆ, ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಕುರಿತಂತೆ ಬಂಡವಾಳ ಹೂಡಿಕೆದಾರರನ್ನು ಸಭೆಗೆ ಆಹ್ವಾನಿಸಲಾಗಿದೆ, ಇಲ್ಲಿ ಬಂಡವಾಳ ಹೂಡುವವರಿಗೆ ರಿಯಾಯತಿ ದರದಲ್ಲಿ ಭೂಮಿ, ವಿದ್ಯುತ್, ನೀರು ಸೇರಿದಂತೆ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಪ್ರವಾಸಿ ಕ್ಷೇತ್ರದ ಪರಿಣಿತರು, ಸಾರ್ವಜನಿಕರು ತಮ್ಮ ಸಲಹೆ, ಯೋಜನೆಗಳು ಮತ್ತು ಸೂಚನೆಗಳನ್ನು ನೀಡುವಂತೆ ಸಚಿವರು ತಿಳಿಸಿದರು.ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಮಾತನಾಡಿ, ಕರಾವಳಿ ಭಾಗದಲ್ಲಿ ಸಿ.ಆರ್.ಝಡ್ ನಿಯಮಗಳಲ್ಲಿ ಸಡಿಲಿಕೆ, ಬಂಡವಾಳ ಹೂಡಿಕೆದಾರರಿಗೆ ತೆರಿಗೆ ಮತ್ತು ವಿದ್ಯುತ್ ರಿಯಾಯತಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದಲ್ಲಿ ಹೆಚ್ಚಿನ ಹೂಡಿಕೆದಾರರು ಆಗಮಿಸಲಿದ್ದಾರೆ ಹಾಗೂ ಸಿಂಗಲ್ ವಿಂಡೋ ಸಿಸ್ಟಂ ಮೂಲಕ ಅವರಿಗೆ ಅಗತ್ಯ ಅನುಮತಿಗಳನ್ನು ಶೀಘ್ರದಲ್ಲಿ ನೀಡುವಂತಾಗಬೇಕು ಎಂದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮಲೆನಾಡು ಭಾಗದಲ್ಲಿನ ಜಲಪಾತಗಳ ವೀಕ್ಷಣೆಗೆ ಮುಕ್ತ ಅವಕಾಶ, ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದರು.ಪ್ರವಾಸಿ ಸ್ಥಳಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಹೋಟೆಲ್, ಮುಖ್ಯ ಸ್ಥಳಗಳಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ ವ್ಯವಸ್ಥೆ, ಕುಟುಂಬ ಸಮೇತ ಪ್ರವಾಸಕ್ಕೆ ಬಂದು ಆನಂದಿಸಲು ಅಗತ್ಯವಿರುವ ಸೌಲಭ್ಯ ಒದಗಿಸಬೇಕು, ಹೋಂ ಸ್ಟೇಗಳಿಗೆ ಅಗತ್ಯ ಅನುಮತಿ ನೀಡಬೇಕು, ಜಿಲ್ಲೆಯಲ್ಲಿ ವಿವಿಧ ರೀತಿಯ 15 ಬಗೆಯ ಟೂರಿಸಂ ಸರ್ಕಿಟ್‌ಗಳಿದ್ದು ಅವುಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಪ್ರವಾಸ ಕ್ಷೇತ್ರದ ಪರಿಣಿತರು ತಿಳಿಸಿದರು. ಸಭೆಯಲ್ಲಿ ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಪಂ ಸಿಇಓ ಡಾ. ದಿಲೀಷ್ ಶಶಿ, ಎಸ್ಪಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ತರಬೇತಿ ನಿರತ ಪ್ರೋಬೇಷನರಿ ಅಧಿಕಾರಿ ಝೂಪಿಶಾನ್ ಹಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರವಾಸಿ ಕ್ಷೇತ್ರಗಳ ಪರಿಣಿತರು ಮತ್ತಿತರರಿದ್ದರು.