ಕನಕಪುರ: ಕಾಡಾನೆ ದಾಳಿಗೆ ತೆಂಗಿನ ಮರಗಳು ಧರೆಗುರುಳಿರುವ ಘಟನೆ ನಾರಾಯಣಪುರ ಮತ್ತು ಕೆರೆಮೇಗಳದೊಡ್ಡಿ ಗ್ರಾಮಗಳಲ್ಲಿ ಸೋಮವಾರ ರಾತ್ರಿ ನಡೆದಿದೆ.
ತೆಂಗಿನಕಲ್ಲು ಅರಣ್ಯ ಮತ್ತು ಬಿಳಿಕಲ್ ಬೆಟ್ಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿ ವೇಳೆ ರೈತರ ಜಮೀನುಗಳ ಮೇಲೆ ದಾಳಿ ಮಾಡುತ್ತಿವೆ. ಸೋಮವಾರ ರಾತ್ರಿ ತೆಂಗಿನ ತೋಟಕ್ಕೆ ನುಗ್ಗಿ ತೆಂಗಿನ ಗಿಡಗಳನ್ನು ಮನಬಂದಂತೆ ಮುರಿದು ನಾಶಗೊಳಿಸಿವೆ. ಮತ್ತೋಂದು ಕಡೆ ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕೆರೆಮೇಗಳದೊಡ್ಡಿ ಗ್ರಾಮದ ರೈತರ ಜಮೀನುಗಳ ಮೇಲೆ ದಾಳಿ ಮಾಡಿ ತೆಂಗಿನ ಗಿಡಗಳನ್ನು ಮುರಿದು ನಾಶಗೊಳಿಸಿವೆ.
ಕಾಡಾನೆ ದಾಳಿಯಿಂದ ನಾಶಗೊಂಡಿರುವ ತೆಂಗಿನ ಗಿಡಗಳು 6ರಿಂದ 7 ವರ್ಷದವಾಗಿದ್ದು ಈಗಷ್ಟೇ ಫಸಲು ಬಿಡಲು ಪ್ರಾರಂಭಿಸಿದ್ದವು. ಸರ್ಕಾರ ನೀಡುವ ಅಲ್ಪ ಪರಿಹಾರದಿಂದ ರೈತರಿಗೆ ನಷ್ಟವಾಗುತ್ತಿದೆ. ಹಾಗಾಗಿ ವೈಜ್ಞಾನಿಕವಾಗಿ ಪರಿಹಾರ ಕೊಡಬೇಕು ಎಂದು ರೈತರು ಮನವಿ ಮಾಡಿದರು.ಬೇಸಿಗೆ ಪ್ರಾರಂಭಕ್ಕೂ ಮುಂಚೆಯೇ ಕಾಡಾನೆ ಹಾವಳಿಗೆ ರೈತರ ಬೆಳೆಗಳಿಗೆ ನುಗ್ಗಲು ಶುರುವಚ್ಚಿಕೊಂಡಿವೆ. ಮುಂದೆ ಬೇಸಿಗೆಯಲ್ಲಿ ನೀರಿಗಾಗಿ ಹೊರಬರುವ ಕಾಡಾನೆಗಳು ರೈತರ ಬೆಳೆಗಳ ಮೇಲೆ ದಾಳಿ ಹೆಚ್ಚಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳು ನಾಶವಾಗಲಿವೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಅರಣ್ಯ ಅಧಿಕಾರಿಗಳು ಕಾಡಾನೆ ದಾಳಿಯಿಂದ ತೆಂಗಿನ ಮರಗಳು ನಾಶವಾದ ರೈತರ ತೋಟಗಳಿಗೆ ಭೇಟಿ ನೀಡಿ ಕಾಡಾನೆ ದಾಳಿಯಿಂದ ನಾಶವಾಗಿರುವ ತೆಂಗಿನ ಗಿಡಗಳನ್ನು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದು ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಕೆ ಕೆ ಪಿ ಸುದ್ದಿ 03:ಕನಕಪುರ ತಾಲೂಕಿನ ನಾರಾಯಣಪುರ ಮತ್ತು ಅರೆಮೇಗಳದೊಡ್ಡಿ ಗ್ರಾಮಗಳಲ್ಲಿ ಕಾಡಾನೆ ದಾಳಿಗೆ ನಾಶವಾಗಿರುವ ತೆಂಗಿನ ಮರಗಳು.