- ಕಾಗಿನೆಲೆ ಕನಕ ಗುರುಪೀಠ ಡಾ.ನಿರಂಜನಾನಂದಪುರಿ ಶ್ರೀ । ಹೊನ್ನಾಳಿಯಲ್ಲಿ ದಾಸಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಎಲ್ಲಿಯವರೆಗೆ ಸ್ವಾಮೀಜಿಗಳು, ಚಿಂತಕರು, ಸಾಧಕರು ಹಾಗೂ ಮಹಾತ್ಮರ ಮಾತುಗಳನ್ನು ಕುಳಿತು ಕೇಳುವ ಸಂಸ್ಕೃತಿ ಅಳವಡಿಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಕುರುಬ ಸಮಾಜ ಜಾಗೃತಿ ಆಗಲಾರದು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಡಾ. ನಿರಂಜನಾನಂದಪುರಿ ಮಹಾಸ್ವಾಮೀಜಿ ನುಡಿದರು.ಬುಧವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಹೊನ್ನಾಳಿ ಮತ್ತು ನ್ಯಾಮತಿ ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ 538ನೇ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕನಕದಾಸರು ಕುಲ ಕುಲ ಎಂದು ಹೊಡೆದಾಡದಿರಿ ಎಂದು ಹೇಳಿದ್ದಾರೆ. ಇದನ್ನು ಕುರುಬ ಸಮಾಜದ ಬಂಧುಗಳು ಬೇರೆಯವರ ಬದಲಿಗೆ ತಮ್ಮ ತಮ್ಮಲ್ಲೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಇದನ್ನು ಬಿಟ್ಟು ಅನ್ಯಜಾತಿ, ಜನಾಂಗದವರೊಂದಿಗೆ ಅನ್ಯೂನತೆಯಿಂದ ಬದುಕಿದರೆ ಮಾತ್ರ ಕುರುಬ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಯಾವ ಸಮಾಜ ಶೈಕ್ಷಣಿಕವಾಗಿ ಪ್ರಬಲವಾಗಿ ಇರುತ್ತದೆಯೋ ಅಂತಹ ಸಮಾಜ ಸಹಜವಾಗಿ ಸಾಮಾಜಿಕವಾಗಿ ಹಾಗೂ ಎಲ್ಲ ರಂಗಗಳಲ್ಲಿ ಬಲಿಷ್ಠವಾಗಿರುತ್ತದೆ. ಇನ್ನೊಂದು ಸಮಾಜದವರನ್ನು ನೋಡಿ ಕಲಿಯುವ ಗುಣ ಅಳವಡಿಸಿಕೊಳ್ಳಬೇಕು. ಸಂಘಟನೆ ಬಲಿಷ್ಠವಾಗಿ ಇರದಿದ್ದರೆ ಯಾವ ಸೌಲಭ್ಯಗಳೂ ಪಡೆಯಲಾಗುವುದಿಲ್ಲ ಎಂದು ಹೇಳಿದರು.ಸಮಾರಂಭ ಉದ್ಘಾಟಿಸಿದ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಜೌಧರಿ ಮಾತನಾಡಿ, ಅಪಮಾನ, ನೋವುಗಳನ್ನು ಸಹಿಸಿ ತಮ್ಮ ಸತ್ಕಾರ್ಯಗಳು, ಸನ್ನಡತೆಗಳಿಂದ ಮೇಲೆ ಬರುವ ಗುಣವನ್ನು ಮಹಿಳೆಯರು ಕನಕದಾಸರ ಜೀವನ ಕ್ರಮದಿಂದ ತಿಳಿದುಕೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಶಿಸ್ತು, ಸಂಯಮ, ಅನ್ಯೂನತೆಗಳನ್ನು ನಮ್ಮ ಸಹೋದರ ಸಮಾಜಗಳನ್ನು ನೋಡಿ ನಾವು ಕಲಿಯಬೇಕಾಗಿದೆ. ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಕುರುಬ ಸಮಾಜದ ಸ್ವಾಮೀಜಿಗಳು ಅವಿಶ್ರಾಂತವಾಗಿ ಪ್ರವಾಸ ಮಾಡಿ ಕುರುಬ ಸಮಾಜದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮ ಮತ್ತು ಉದ್ದೇಶಗಳನ್ನು ಸಮಾಜ ಬಾಂಧವರು ಅರ್ಥ ಮಾಡಿಕೊಳ್ಳಬೇಕು. ತಮ್ಮ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 5 ಗ್ಯಾರಂಟಿಗಳ ಮೂಲಕ ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತವನ್ನು ಅಳವಡಿಸಿಕೊಂಡಿದೆ ಎಂದರು.ಕನಕದಾಸರ ಕುರಿತು ಶಿವಮೊಗ್ಗದ ಡಾ.ಲಿಂಗದಹಳ್ಳಿ ಹಾಲಪ್ಪ ಉಪನ್ಯಾಸ ನೀಡಿದರು. ಕುರುಬ ಸಮಾಜ ಕಾರ್ಯಾಧ್ಯಕ್ಷ ಧರ್ಮಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಆರ್. ಮಹೇಶ್, ಶಿಕಾರಿಪುರದ ಗೋಣಿ ಮಾಲತೇಶ್, ಶ್ರೀದೇವಿ ಧರ್ಮಪ್ಪ, ಸಂಘದ ತಾಲೂಕು ಅಧ್ಯಕ್ಷ ಎಂ.ಸಿ. ಮೋಹನ್ ನೆಲಹೊನ್ನೆ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಎಚ್.ಎ.ಗದ್ದಿಗೇಶ್ ಹಾಗೂ ಶಿವರಾಂ ನಾಯ್ಕ, ಸಮಾಜದ ಮುಖಂಡರಾದ ಎಚ್.ಎ. ನರಸಿಂಹಪ್ಪ, ಪ್ರಕಾಶ್ ಆರುಂಡಿ, ಬಿ.ಇ.ಒ. ಕೆ.ಟಿ.ನಿಂಗಪ್ಪ, ಮಹಿಳಾ ಅಧ್ಯಕ್ಷ ಪಂಕಜ ಅರುಣ್ ಕುಮಾರ್, ಸೌಮ್ಯ, ತಂಗಿನಮರದ ಮಾದಪ್ಪ, ನಾಗರಾಜ್ ದೊಂಕತ್ತಿ, ಸಣ್ಣ ನೀರಾವರಿ ಎ.ಇ.ಇ. ಹರೀಶ್, ಸಿಪಿಐ ಸುನೀಲ್ ಕುಮಾರ್, ಎಚ್.ಬಿ.ಅಣ್ಣಪ್ಪ, ವಾಗೀಶ್, ಸಣ್ಣಕ್ಕಿ ಬಸವನಗೌಡ, ಆರ್.ನಾಗಪ್ಪ ಮತ್ತಿತರರು ಭಾಗವಹಿಸಿದ್ದರು.ಕನಕದಾಸ ಜಯಂತ್ಯುತ್ಸವ ಅಂಗವಾಗಿ ಅರಕೆರೆಯಿಂದ ಬೈಕ್ ರ್ಯಾಲಿ ನಡೆಯಿತು. ಸಾರೋಟಲ್ಲಿ ಸ್ವಾಮೀಜಿ ಅವರೊಂದಿಗೆ ಕನಕದಾಸ ವೃತ್ತದವರಿಗೆ ರ್ಯಾಲಿ ಆಗಮಿಸಿತು. ಈ ವೇಳೆ ಪೂರ್ಣಕುಂಭಗಳ ಹೊತ್ತ ಮಹಿಳೆಯರು, ಡೊಳ್ಳು ಮಂಗಳವಾದ್ಯಗಳೊಂದಿಗೆ ಸ್ವಾಮೀಜಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಅನ್ನ ದಾಸೋಹ ನಡೆಯಿತು.
- - -(ಕೋಟ್) ವಿಶ್ವದಲ್ಲಿ ಯಾವ ದೇಶದಲ್ಲಿಯೂ ಕೂಡ ಕೇವಲ ಭಕ್ತಿಗೆ ಮೆಚ್ಚಿ ದೇವರೇ ತಿರುಗಿ ಭಕ್ತನಿಗೆ ದರ್ಶನ ನೀಡಿದ ಉದಾಹರಣೆ ನೋಡಲು ಸಿಗುವುದಿಲ್ಲ. ಆದರೆ, ಭಕ್ತ ಕನಕದಾಸರ ಭಕ್ತಿಗೆ ಮೆಚ್ಚಿ ಉಡುಪಿಯ ಶ್ರೀಕೃಷ್ಠ ಪಶ್ಚಿಮಕ್ಕೆ ತಿರುಗಿ ಕಿಂಡಿಯ ಮೂಲಕ ಕನಕದಾಸರಿಗೆ ದರ್ಶನ ನೀಡಿದ್ದಾರೆ. ಇದರಿಂದ ಎಲ್ಲಕ್ಕಿಂತ ಭಕ್ತಿಯೇ ಶ್ರೇಷ್ಠವಾದದ್ದು ಎಂಬುದನ್ನು ನಿರೂಪಿಸುತ್ತದೆ.
- ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ.- - -
-17ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿಯಲ್ಲಿ ಕನಕದಾಸರ 538ನೇ ಜಯಂತ್ಯುತ್ಸವ ಸಮಾರಂಭವನ್ನು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಜೌಧರಿ ಉದ್ಘಾಟಿಸಿದರು. ಡಾ.ನಿರಂಜನಾನಂದಪುರಿ ಮಹಾಸ್ವಾಮೀಜಿ, ಎಚ್.ಬಿ.ಮಂಜಪ್ಪ, ಶಾಸಕ ಡಿ.ಜಿ.ಶಾಂತನಗೌಡ ಇನ್ನಿತರ ಗಣ್ಯರು ಇದ್ದರು.