ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅಗತ್ಯ: ಜಿಲ್ಲಾಧಿಕಾರಿ ವೆಂಕಟರಾಜ್

KannadaprabhaNewsNetwork |  
Published : Oct 10, 2025, 01:01 AM IST

ಸಾರಾಂಶ

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರತಿಯೊಬ್ಬರೂ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಪ್ರಕೃತಿ, ಪರಿಸರ ಹಾಗೂ ವನ್ಯಜೀವಿಗಳನ್ನು ಉಳಿಸಲು ಸಾಧ್ಯ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟರಾಜ್ ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗ ವತಿಯಿಂದ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ (ಕರಾವಿಪ) ಕೊಡಗು ಜಿಲ್ಲಾ ಸಮಿತಿ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ( ಎನ್ನೆಸ್ಸೆಸ್ ) ಘಟಕಗಳ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ನಗರದ ಅರಣ್ಯ ಭವನದ ಆವರಣದಲ್ಲಿ "ಮಾನವ ಪ್ರಾಣಿ ಸಹಬಾಳ್ವೆ " ಎಂಬ ಘೋಷವಾಕ್ಯದೊಂದಿಗೆ ಗುರುವಾರ ( ಅ. 9ರಂದು ) ಹಮ್ಮಿಕೊಂಡಿದ್ದ 71 ನೇ ವನ್ಯಜೀವಿ ಸಪ್ತಾಹ : 2025 ದ ಅಂಗವಾಗಿ "ಪರಿಸರ ನಡಿಗೆ " ಕಾಲ್ನಡಿಗೆ ಜಾಗೃತಿ ಜಾಥಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದರೊಂದಿಗೆ ಜೀವ ವೈವಿಧ್ಯವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ಸಂರಕ್ಷಿಸಬೇಕು ಎಂದರು.

ಜಾಗೃತಿ ಬೆಳೆಸಬೇಕು:

ಅರಣ್ಯ , ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಬೆಳೆಸಬೇಕು. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಇಂತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಅರಣ್ಯ ಸಂರಕ್ಷಣೆಯು ಕೇವಲ ಅರಣ್ಯ ಇಲಾಖೆಯವರಿಗೆ ಮಾತ್ರ ಸೇರಿದ್ದಲ್ಲ. ಇದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ. ಉತ್ತಮ ಪರಿಸರವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟರಾಜ್ ಹೇಳಿದರು.

ಇಂದಿನ ವಿದ್ಯಾರ್ಥಿಗಳಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಪ್ರೇರೇಪಿಸಬೇಕು.

ಪರಿಸರ ಪ್ರೇಮ ಮಾದರಿ:

ಅರಣ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಕೊಡಗಿನ ಜನತೆಯ ಪರಿಸರ ಪ್ರೇಮ ಮಾದರಿಯಾದುದು ಎಂದರು.

ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ನೀಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಜಾಥಾಕ್ಕೆ ಶುಭ ಕೋರಿದರು.

ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನಾವು ಅರಣ್ಯ, ವನ್ಯಜೀವಿಗಳು, ನದಿ, ಸರೋವರ ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು‌ ಪಣ ತೊಡಬೇಕು ಎಂದರು.

ಅರಣ್ಯ ಪ್ರದೇಶದಂಚಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾನವ- ಪ್ರಾಣಿ ಸಂಘರ್ಷದ ನಿಯಂತ್ರಿಸಿ ಮೂಕ ಪ್ರಾಣಿಗಳಿಗೆ ತೊಂದರೆ ಆಗದಂತೆ ನಮ್ಮ‌ ಬದುಕು ರೂಪಿಸಿಕೊಂಡು ವನ್ಯಪ್ರಾಣಿ ಸ್ನೇಹ ಜೀವನ ನಡೆಸಬೇಕಾದ ಅಗತ್ಯವಿದೆ’ ಎಂದರು.

ವನ್ಯಜೀವಿಗಳು ಭೂಜಗತ್ತಿನ ಪ್ರಮುಖ ಜೀವಿಗಳಾಗಿವೆ. ವನ್ಯಜೀವಿಗಳ ಜತೆಗೆ ಅವುಗಳ ಆವಾಸ ಸ್ಥಾನ (ಅರಣ್ಯ)ಗಳನ್ನು ಸಂರಕ್ಷಿಸುವಲ್ಲಿ ಮಾನವ ಪಾತ್ರದ ಬಗ್ಗೆ ಹಾಗೂ ಆಹಾರ ಸರಪಳಿ ಮತ್ತು ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಪ್ರೇಮಕುಮಾರ್ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ವನ್ಯಜೀವಿ ಸಪ್ತಾಹ ಜಾಥಾ ನಡೆಸಲಾಗುತ್ತಿದೆ ಎಂದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ನಿರ್ದೇಶಕ ಎಂ.ಎನ್.ವೆಂಕಟನಾಯಕ್, ಪರಿಸರ ಘೋಷಣೆಗಳನ್ನು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ. ಅಭಿಷೇಕ್ ( ಪ್ರಾದೇಶಿಕ), ಸಂದೀಪ್ ಪಿ. ಅಭಯಂಕರ್ ( ಸಾಮಾಜಿಕ ಅರಣ್ಯ) , ಸಯ್ಯದ್ ಅಹಮದ್ ಶಾ ಹುಸೈನಿ ( ಜಾಗೃತ ದಳ), ಪ್ರೊಬೇಷನರಿ ಐ.ಎಫ್.ಎಸ್. ಅಧಿಕಾರಿಗಳಾದ ಸೆಂದಿಲ್ ಕುಮಾರ್, ತೆಸಿನ್ ಬಾನು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಾರಿಕೆ ದಿನೇಶ್ ಕುಮಾರ್ ಪಾಲ್ಗೊಂಡಿದ್ದರು.

ಜಾಥಾದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ.ಪಿ.ಕಾರ್ಯಪ್ಪ( ವನ್ಯಜೀವಿ ವಿಭಾಗ) ಶ್ರೀನಿವಾಸ ನಾಯಕ್, ಎ.ಎ. ಗೋಪಾಲ್, ಕೆ.ಪಿ. ಗೋಪಾಲ್, ಪುಷ್ಪಗಿರಿ ವನ್ಯಜೀವಿ ವಲಯದ ಆರ್. ಎಫ್. ಓ. ದಿನೇಶ್, ಗ್ರೀನ್ ಸಿಟಿ ಫೋರಂನ ಅಧ್ಯಕ್ಷ ಚೇಯ್ಯಂಡ ಸತ್ಯ, ಪ್ರಮುಖರಾದ ಕವನ್ ಕೊತ್ತೋಳಿ ಹರ್ಷಿತ, ಭಕ್ತಿ ಭೋಜಮ್ಮ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಎಚ್.ಆರ್.ಮುತ್ತಪ್ಪ, ಕ.ಸಾ.ಪ.ಸದಸ್ಯ ಕೆ.ವಿ.ಉಮೇಶ್, ಜಾಥಾದ ನೇತೃತ್ವ ವಹಿಸಿದ್ದ ಪುಷ್ಪಗಿರಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ. ದಿನೇಶ್, ಶಿಕ್ಷಕರಾದ ಸಿ.ಡಿ.ಲೋಕೇಶ್, ಎಂ.ಎಸ್. ಕೇಶವ, ಎಸ್.ಆರ್.ಶಿವಲಿಂಗ ಸೇರಿದಂತೆ ಅರಣ್ಯ ಇಲಾಖೆಯ ಆರ್.ಎಫ್.ಓ.ಗಳು, ಡಿ.ಆರ್.ಎಫ್.ಓ.ಗಳು, ಸಿಬ್ಬಂದಿ, ಇತರರು ಇದ್ದರು.

ಕಾಲ್ನಡಿಗೆ ಜಾಥಾದಲ್ಲಿ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್, ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಹಾಗೂ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಹಾಗೂ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಭಿತ್ತಿಫಲಕಗಳೊಂದಿಗೆ

ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಿದರು.

"ಜನ ಜಾಗೃತಿ ಕಾಲ್ನಡಿಗೆ ಜಾಥಾ ": ನಗರದ ಅರಣ್ಯ ಭವನದಿಂದ ಆರಂಭಗೊಂಡ 4 ಕಿ.ಮೀ.ದೂರದ ಕಾಲ್ನಡಿಗೆ ಜಾಥಾವು ಜನರಲ್ ತಿಮ್ಮಯ್ಯ ವೃತ್ತ, ಟೌನ್ ಹಾಲ್, ಚೌಕಿ, ಮಹದೇವಪೇಟೆ ಮೂಲಕ ಸ್ವಾಗತ ಬೆಟ್ಟದಲ್ಲಿನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸಮಾಪನಗೊಂಡಿತು.

ಕಾಲ್ನಡಿಗೆ ಜಾಗೃತಿ ಜಾಥಾ

ಜಾಗೃತಿ ಜಾಥಾದಲ್ಲಿ ನಾಳೆಗಾಗಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಿಸಿ, ಅರಣ್ಯಗಳು ಜಗದ ಜೀವಾಳ, ಹಸಿರೇ ಉಸಿರು, ಜಲಮೂಲಗಳ ಸಂರಕ್ಷಣೆ, ಕಾಡಿನ ರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡೇ ರಾಷ್ಟ್ರದ ಸಂಪತ್ತು, ಪಶ್ಚಿಮ ಘಟ್ಟ ಸಂರಕ್ಷಣೆ ಎಲ್ಲರ ಹೊಣೆ, ವನ್ಯಜೀವಿ ಸಂಪತ್ತನ್ನು ಭವಿಷ್ಯಕ್ಕಾಗಿ ಸಂರಕ್ಷಿಸಿ ಎಂಬಿತ್ಯಾದಿ ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಥಾದಲ್ಲಿ ಘೋಷಣಾ ಫಲಕಗಳನ್ನು ಹಿಡಿದು ಪರಿಸರ ಘೋಷಣೆಗಳನ್ನು ಪ್ರಚುರಪಡಿಸಲಾಯಿತು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ