ದುಗ್ಗಳ ಸದಾನಂದ
ಫಲಭರಿತ ಗಿಡಗಳನ್ನು ನಾಶಪಡಿಸುತ್ತಿದ್ದ ಕಾಡಾನೆಗಳಿಂದ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗ ಕಾಡಾನೆ ಲದ್ದಿಯಲ್ಲಿ ಜೀರ್ಣವಾಗದ ಕಾಫಿ ಬೀಜಗಳು ಯಥೇಚ್ಛವಾಗಿ ಕಂಡುಬರುತ್ತಿದ್ದು, ಕಾಫಿ ಬೀಜಗಳನ್ನು ತಿನ್ನುತ್ತಿರುವುದರಿಂದ ಬೆಳೆಗಾರರು ಆತಂಕಿತರಾಗಿದ್ದಾರೆ.
ನಾಪೋಕ್ಲು ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಈ ಹಿಂದೆ ಕಾಡಾನೆಗಳು ಕಾಫಿ, ಅಡಕೆ, ತೆಂಗು ಗಿಡಗಳನ್ನು ಹಾಗೂ ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿದ್ದರೆ, ಈಗ ಕಾಫಿಯ ಹಣ್ಣುಗಳನ್ನು ಮೆದ್ದು ನಷ್ಟಪಡಿಸುತ್ತಿವೆ. ಇದಕ್ಕೆ ಕಾಫಿ ತೋಟದಲ್ಲಿ ಕಾಡಾನೆಗಳ ಲದ್ದಿಯಲ್ಲಿ ಅಧಿಕವಾಗಿ ಕಂಡುಬರುತ್ತಿರುವ ಕಾಫಿ ಬೀಜಗಳು ಸಾಕ್ಷ್ಯ ನೀಡಿದೆ.ಮರಂದೋಡ ಗ್ರಾಮ ವ್ಯಾಪ್ತಿಯಲ್ಲಿ 5-6 ಆನೆಗಳು ಅಡ್ಡಾಡುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.