ಕನ್ನಡಪ್ರಭ ವಾರ್ತೆ ಸಕಲೇಶಪುರ
ಹೌದು! ಕಳೆದ ವರ್ಷ 6 ತಿಂಗಳ ಕಾಲ ಮಳೆಯಾದರೂ ಪ್ರಸಕ್ತ ವರ್ಷದ ಬಿಸಿಲಿನ ಧಗೆ ಭೂಮಿಯಲ್ಲಿ ತೇವಾಂಶವನ್ನು ನಾಶಮಾಡಿರುವುದರಿಂದ ಕಾಫಿಗಿಡಗಳು ಅಕ್ಷರಶಃ ನಾಶವಾಗುತ್ತಿವೆ.
ಸಾಮಾನ್ಯವಾಗಿ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ತಿಂಗಳ ಆರಂಭದಲ್ಲಿ ಮಳೆಯಾಗುವ ಮೂಲಕ ಕಾಫಿ ಬೆಳೆಗಾರರನ್ನು ರಕ್ಷಿಸುತ್ತಿದ್ದ ಮಳೆರಾಯ, ಈ ಬಾರಿ ಏಪ್ರಿಲ್ ತಿಂಗಳ ಮೊದಲ ವಾರ ಮುಗಿದರೂ ದರ್ಶನ ನೀಡದಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತವರ್ಷ ಶಿವರಾತ್ರಿ ಹಬ್ಬದ ಮುನ್ನಾದಿನ ಹಾಗೂ ಮಾರ್ಚ್ ತಿಂಗಳ ಅಂತ್ಯದಲ್ಲಿ ತಾಲೂಕಿನ ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಮಳೆಯಾಗಿರುವುದನ್ನು ಹೊರತುಪಡಿಸಿದರೆ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಸ್ವಲ್ಪವೂ ಮಳೆಯಾಗದಿರುವುದರಿಂದ ಬೆಳೆಗಾರರಿಗೆ ಕಾಫಿ ತೋಟಗಳ ಉಳಿಸಿಕೊಳ್ಳುವ ಚಿಂತೆ ಶುರುವಾಗಿದೆ.ನೀರಿನ ವ್ಯವಸ್ಥೆ ಹೊಂದಿರುವ ಕಾಫಿ ಬೆಳೆಗಾರರು ೧೫ ದಿನಕ್ಕೊಮ್ಮೆ ಹನಿನೀರಾವರಿ ಮೂಲಕ ನೀರುಣಿಸುತ್ತಿದ್ದಾರೆ. ಆದರೆ, ತಾಲೂಕಿನ ಶೇ.೩೦ರಷ್ಟು ಬೆಳೆಗಾರರು ಯಾವುದೇ ನೀರಿನ ಆಶ್ರಯವಿಲ್ಲದೆ ಮಳೆಯನ್ನೇ ನಂಬಿ ಕಾಫಿ ತೋಟ ನಿರ್ವಹಿಸುತ್ತಿದ್ದಾರೆ. ಇಂತಹ ಬೆಳೆಗಾರರಿಗೆ ಮಳೆಯ ವಿಳಂಬ ಮರ್ಮಾಘಾತವನ್ನೇ ಉಂಟುಮಾಡಿದೆ.
ಅಧಿಕ ಸೆಖೆ:
ಕಳೆದ ಒಂದು ವಾರದಲ್ಲಿ ತಾಲೂಕಿನ ಹಲವೆಡೆ ದಟ್ಟ ಮೋಡ ಅವರಿಸಿದರೂ ಮಳೆಯಾಗದಿರುವುದು ಬೆಳೆಗಾರರ ನಿರಾಸೆಗೆ ಕಾರಣವಾಗುತ್ತಿದೆ. ತಾಲೂಕಿನ ಗಡಿಹಂಚಿಕೊಂಡಿರುವ ಮೂಡಿಗೆರೆ ಹಾಗೂ ಬೇಲೂರು ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ, ನಮ್ಮ ತಾಲೂಕಿಗೆ ಏನಾಗಿದೆ ಎಂಬ ಅಮಾಯಕ ಪ್ರಶ್ನೆ ಬೆಳೆಗಾರರ ವಲಯದಿಂದ ಕೇಳಿ ಬರುತ್ತಿದೆ.
ಕಾಫಿ ಬೆಳೆಗೆ ಧಾರಣೆ ಹೆಚ್ಚಾದಂತೆ ಕಾಫಿ ಬೆಳೆಯುವ ವಿಸ್ತೀರ್ಣ ಹೆಚ್ಚುತ್ತಿದೆ. ಸಾಮಾನ್ಯವಾಗಿ ರಾಗಿ, ಜೋಳ ಬೆಳೆಯುತ್ತಿದ್ದ ಆಲೂರು ತಾಲೂಕಿನಿಂದ ಪಾಳ್ಯ ಹೋಬಳಿಯವರೆಗೆ ಕಾಫಿ ಬೆಳೆ ತನ್ನ ವಿಸ್ತೀರ್ಣತೆ ಹೆಚ್ಚಿಸಿಕೊಂಡಿದ್ದು, ಈ ಭಾಗದಲ್ಲಿ ಕನಿಷ್ಠ ಪ್ರಮಾಣದಲ್ಲಿ ಮಳೆಯಾಗುವುದರಿಂದ ಕೊಳವೆ ಬಾವಿ ಮೂಲಕ ಕಾಫಿ ತೋಟಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಬೇಸಿಗೆಯಲ್ಲಿ ಕೊಳವೆ ಬಾವಿಗಳಲ್ಲಿ ನೀರಿನಾಂಶ ಕಡಿಮೆಯಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿತೋಟಗಳು ನಾಶವಾಗುತ್ತಿವೆ ಎಂಬ ಮಾತು ಬೆಳೆಗಾರರ ವಲಯದಿಂದ ಕೇಳಿ ಬರುತ್ತಿದೆ.
* ಹೇಳಿಕೆ 1
ಬಸವರಾಜು, ವಿಸ್ತರಣಾಧಿಕಾರಿ, ಕಾಫಿ ಮಂಡಳಿ, ಮಠಸಾಗರ
* ಹೇಳಿಕೆ2
ಬೆಳಗೋಡು ಹೋಬಳಿಯಲ್ಲಿ ಇದುವರೆಗೆ ಒಂದು ಹನಿ ಮಳೆಯಾಗಿಲ್ಲ. ಅಧಿಕ ಉಷ್ಣಾಂಶದಿಂದ ಕಾಫಿಗಿಡಗಳ ರಕ್ಷಿಸುವುದೇ ನಮಗೆ ಸವಾಲಾಗಿದೆ.ಗಿರೀಶ್. ಈಶ್ವರಹಳ್ಳಿ, ಬೆಳಗೋಡು ಹೋಬಳಿ
೧೦ ಎಸ್‌ಕೆಪಿಪಿ ೨ ಒಣಗಿರುವ ಕಾಫಿ ಗಿಡಗಳು