ನಾಗಮಂಗಲ ತಾಲೂಕು ಕೇಂದ್ರ ಸ್ಥಾನದ ಅಭಿವೃದ್ಧಿಗೆ ಸಹಕರಿಸಿ: ಚಲುವರಾಯಸ್ವಾಮಿ

KannadaprabhaNewsNetwork |  
Published : Sep 04, 2025, 01:00 AM IST
3ಕೆಎಂಎನ್ ಡಿ21 | Kannada Prabha

ಸಾರಾಂಶ

ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವವಾಗ ಪರ ವಿರೋಧ ಇದ್ದೆ ಇರುತ್ತದೆ. ವೈಯಕ್ತಿಕವಾಗಿ ಯಾವುದೇ ಸಮುದಾಯಗಳಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವರು ತಮಗೆ ಅನುಕೂಲವಾತ್ತದೆಂದರೆ ಕಾನೂನು ಬದ್ಧವಾಗಿ ಮಾಡಿ ಎನ್ನುತ್ತಾರೆ. ವೈಯುಕ್ತಿಕ ಹಿತಾಸಕ್ತಿ ಇದ್ದರೆ ಸ್ವಲ್ಪ ಅನುಸರಿಸಿ ಎನ್ನುತ್ತಾರೆ. ಇದು ಮನುಷ್ಯನ ಸಹಜ ಆಲೋಚನೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೊಡ್ಡ ಹಳ್ಳಿಯಂತಿರುವ ತಾಲೂಕು ಕೇಂದ್ರ ಸ್ಥಾನವನ್ನು ಸುಂದರ ಪಟ್ಟಣವನ್ನಾಗಿ ಅಭಿವೃದ್ಧಿ ಪಡಿಸಬೇಕೆಂಬುದೇ ನನ್ನ ಮುಖ್ಯ ಉದ್ದೇಶ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯ ಹಿರಿಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ನೀರುಗಂಟಿ ಕಾಲುವೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವವಾಗ ಪರ ವಿರೋಧ ಇದ್ದೆ ಇರುತ್ತದೆ. ವೈಯಕ್ತಿಕವಾಗಿ ಯಾವುದೇ ಸಮುದಾಯಗಳಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವರು ತಮಗೆ ಅನುಕೂಲವಾತ್ತದೆಂದರೆ ಕಾನೂನು ಬದ್ಧವಾಗಿ ಮಾಡಿ ಎನ್ನುತ್ತಾರೆ. ವೈಯುಕ್ತಿಕ ಹಿತಾಸಕ್ತಿ ಇದ್ದರೆ ಸ್ವಲ್ಪ ಅನುಸರಿಸಿ ಎನ್ನುತ್ತಾರೆ. ಇದು ಮನುಷ್ಯನ ಸಹಜ ಆಲೋಚನೆ ಎಂದರು.

ನೀರುಗಂಟಿ ಕಾಲುವೆ ರಸ್ತೆ ಒತ್ತುವರಿ ತೆರವಿಗೆ ಕೆಲ ಸ್ಥಳೀಯರು ಪರ-ವಿರೋಧಕ್ಕೆ ನನಗೆ ಬೇಸರವಿಲ್ಲ. ಆದರೆ, ಒಂದು ಹಳ್ಳಿಯಂತಿರುವ ತಾಲೂಕು ಕೇಂದ್ರವನ್ನು ದೊಡ್ಡ ಪಟ್ಟಣವನ್ನಾಗಿಸಬೇಕೆಂಬ ಆಸೆ ನನಗಿದೆ. ಒತ್ತುವರಿ ತೆರವಿನಿಂದ ಪಟ್ಟಣದ ಒಂದಷ್ಟು ಜನರಿಗೆ ತೊಂದರೆಯಾಗುತ್ತದೋ ಇಲ್ಲವೋ ಒಟ್ಟಾರೆ ಕಾನೂನು ರೀತಿಯಲ್ಲಿ ಯಾರಿಗೂ ತೊಂದರೆಯಾಗಬಾರದು. ಇಡೀ ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವವರು ಯಾರೇ ಆಗಲಿ ಅವರನ್ನು ಖಾಲಿ ಮಾಡಿಸಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ ಎಂದರು.

ಸೂಕ್ತ ದಾಖಲೆಯಿದ್ದು ಭೂಮಿ ಕಳೆದುಕೊಳ್ಳುವವರಿಗೆ ಸರ್ಕಾರದಿಂದ ಪರಿಹಾರ ಕೊಡಬಹುದೋ ಅಥವಾ ಬದಲಿ ನಿವೇಶನ ಕೊಡಬಹುದೋ ಈ ಬಗ್ಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದರು.

ವಾರದ ಸಂತೆ ನಡೆಯುವ ಸ್ಥಳಕ್ಕೆ ಹೋಗಲು ರಸ್ತೆಯಾಗಬೇಕು. ರಸ್ತೆಬದಿ ಅಂಗಡಿಗಳು, ಟ್ರಾಫಿಕ್ ಕಡಿಮೆಯಾಗಬೇಕು. ಅದಕ್ಕಾಗಿ ಈಗಿರುವ ಪುರಸಭೆ ಕಚೇರಿ ಸ್ಥಳಾಂತರಿಸಿ ಆ ಕಟ್ಟಡವನ್ನು ನೆಲಸಮಗೊಳಿಸಿ ಆ ಜಾಗದಲ್ಲಿ ಮೂರು ಹಂತದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡುವ ಮೂಲಕ ಇಡೀ ಪಟ್ಟಣವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ನಾನು ಯಾರ ಪರ ಅಥವಾ ವಿರೋಧವೂ ಇಲ್ಲ. ನನ್ನನ್ನು ಯಾರೇ ಬೈದರೂ ಹೊಗಳಿದರೂ ಲೆಕ್ಕಿಸುವುದಿಲ್ಲ. ವೈಯುಕ್ತಿಕವಾಗಿ ಯಾರಿಗೂ ತೊಂದರೆ ಕೊಡುವುದಿಲ್ಲ. ಸ್ವಂತ ಆಸ್ತಿ ಕಳೆದುಕೊಳ್ಳುವವರಿಗೆ ಮಾತ್ರ ಪರಿಹಾರ ಕೊಡಿಸುವ ಬಗ್ಗೆ ಯೋಚಿಸಿ ಇಡೀ ಪಟ್ಟಣವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.

ಸಚಿವರ ಭೇಟಿಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದಾಗ ಕೆಲ ರೈತರು, ನಾವು ತುಂಬಾ ಬಡವರು ಇರುವ ಅಲ್ಪಸ್ವಲ್ಪ ಭೂಮಿಯನ್ನು ನಮ್ಮಿಂದ ಕಸಿದುಕೊಂಡರೆ ನಾವು ಬದುಕುವುದಾದರೂ ಹೇಗೆ. ಈ ಭೂಮಿಯನ್ನು ಬಿಟ್ಟರೆ ನಮಗೆ ಬೇರ್‍ಯಾವುದೇ ಜಾಗವಿಲ್ಲ. ಆದ್ದರಿಂದ ನಮಗೆ ಸೂಕ್ತ ಪರಿಹಾರ ಕೊಡಿಸಬೇಕು. ಅಲ್ಲಿವರೆಗೆ ತೆರವು ಕಾರ್ಯ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಸಚಿವರಲ್ಲಿ ಕೈಮುಗಿದು ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತೆರವಿಗೂ ಮುನ್ನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದಾಖಲೆ ಪರಿಶೀಲಿಸಿದ ನಂತರ ಪರ್‍ಯಾಯ ಜಾಗ ಕೊಡುವ ಅಥವಾ ನಿವೇಶನ ನೀಡುವ ಅಥವಾ ಪರಿಹಾರ ಘೋಷಣೆಗೆ ಕ್ರಮ ವಹಿಸಲಾಗುವುದು. ಸೂಕ್ತ ದಾಖಲೆಗಳಿದ್ದರೆ ಖಂಡಿತ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಪುರಸಭೆ ಅಧ್ಯಕ್ಷ ಅಲಿ ಅನ್ಸರ್‌ಪಾಷ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಸದಸ್ಯ ತಿಮ್ಮಪ್ಪ ಸೇರಿದಂತೆ ಹಲವರು ಇದ್ದರು.

ಸ್ಥಳದಲ್ಲಿ ಪ್ರತಿಭಟನೆ:

ನೀರುಗಂಟಿ ಕಾಲುವೆ ರಸ್ತೆ ಒತ್ತುವರಿ ತೆರವು ಜಾಗಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಭೇಟಿ ನೀಡಿ ತೆರಳಿದ ಕೆಲ ಹೊತ್ತಿನಲ್ಲಿ ಅದೇ ರಸ್ತೆಗೆ ಅಡ್ಡಲಾಗಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಸಿದ ಸ್ಥಳೀಯರು, ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿದರು.

ನಮ್ಮ ಬಳಿ ಇರುವ ಜಾಗಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಖಾತೆಯೂ ಆಗಿದೆ. ಕಂದಾಯವನ್ನು ಕೂಡ ಕಟ್ಟುತ್ತಿದ್ದೇವೆ. ಆದರೆ, ಈಗ ಏಕಾಏಕಿ ಯಾವುದೇ ನೋಟಿಸ್ ನೀಡದೆ ತೆರವುಗೊಳಿಸುತ್ತಿರುವುದು ಸರಿಯಲ್ಲ. ನಮ್ಮ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದ ನಂತರ ರಸ್ತೆ ಕಾಮಗಾರಿ ನಡೆಸಲಿ ಅಲ್ಲಿಯವರೆಗೆ ಯಾವುದೇ ತೆರವು ಕಾರ್ಯ ನಡೆಯಲು ಬಿಡುವುದಿಲ್ಲವೆಂದು ಸ್ಥಳದಲ್ಲಿ ಪ್ರತಿಭಟಿಸಿದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ