ಕುಸಿದು ಬಿದ್ದ ಕಾಳಿನದಿ ಸೇತುವೆ: ತಪ್ಪಿದ ಭಾರಿ ಅವಘಡ

KannadaprabhaNewsNetwork |  
Published : Aug 08, 2024, 01:37 AM IST
ಸೇತುವೆ ಕುಸಿತವಾಗಿರುವುದು ಡ್ರೋನ್‌ ಗ್ಯಾಮೆರಾದಲ್ಲಿ ಕಂಡಿದ್ದು ಹೀಗೆ. | Kannada Prabha

ಸಾರಾಂಶ

ಮಧ್ಯರಾತ್ರಿ 1.30 ಗಂಟೆ ಸುಮಾರಿಗೆ ಗೋವಾದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಟ್ರಕ್ ಈ ಸೇತುವೆಯ ಮೇಲೆ ಬರುತ್ತಿದ್ದಂತೆ ಸೇತುವೆ ಏಕಾಏಕಿ ಕುಸಿದು ಬಿತ್ತು. ಅದೂ ಮೂರು ಕಡೆಗಳಲ್ಲಿ ಸೇತುವೆ ಕುಸಿಯಿತು.

ಕಾರವಾರ: ಗೋವಾ- ಕಾರವಾರ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ಕಾಳಿ ನದಿ (ಹಳೆಯ) ಸೇತುವೆ ಮಂಗಳವಾರ ರಾತ್ರಿ ಕುಸಿದು ಬಿದ್ದಿದೆ. ಅದೇ ವೇಳೆ ಸಂಚರಿಸುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿದ್ದು, ತಮಿಳುನಾಡಿನ ಲಾರಿ ಚಾಲಕನನ್ನು ಮೀನುಗಾರರು ರಕ್ಷಿಸಿದ್ದಾರೆ. ಮಧ್ಯರಾತ್ರಿ ನಡೆದ ಈ ಘಟನೆ ಕಾರವಾರಿಗರನ್ನು ಬೆಚ್ಚಿಬೀಳಿಸಿದೆ. ಮಳೆಗಾಲದ ದುರಂತಗಳ ಸರಮಾಲೆಗೆ ಕಾಳಿ ಸೇತುವೆಯೂ ಸೇರ್ಪಡೆಯಾಗಿದೆ. ಮಧ್ಯರಾತ್ರಿ 1.30 ಗಂಟೆ ಸುಮಾರಿಗೆ ಗೋವಾದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಟ್ರಕ್ ಈ ಸೇತುವೆಯ ಮೇಲೆ ಬರುತ್ತಿದ್ದಂತೆ ಸೇತುವೆ ಏಕಾಏಕಿ ಕುಸಿದು ಬಿತ್ತು. ಅದೂ ಮೂರು ಕಡೆಗಳಲ್ಲಿ ಸೇತುವೆ ಕುಸಿಯಿತು. ಟ್ರಕ್ ಕೆಳಕ್ಕುರುಳಿತು. ಅದೃಷ್ಟವಶಾತ್ ಲಾರಿಯ ಕ್ಯಾಬಿನ್‌ನ ಮೇಲ್ಭಾಗ ಸ್ವಲ್ಪ ಮಾತ್ರ ನೀರಿನಿಂದ ಮೇಲಕ್ಕಿತ್ತು. ಚಾಲಕ ಕಸರತ್ತು ಮಾಡಿ ಕ್ಯಾಬಿನ್ ಮೇಲೇರಿ ಸಹಾಯಕ್ಕಾಗಿ ಅರಚುತ್ತಿದ್ದ. ಅಷ್ಟರಲ್ಲಿ ಭಾರಿ ಸದ್ದಿನಿಂದ ಎಚ್ಚರಗೊಂಡ ಸ್ಥಳೀಯರು ಮನೆಯಿಂದ ಹೊರಗೋಡಿ ಬಂದರೆ ಸೇತುವೆ ಕುಸಿದಿದ್ದು ಕಂಡುಬಂತು. ಮೀನುಗಾರರು ತಕ್ಷಣ ಬೋಟ್ ಕೊಂಡೊಯ್ದು ಲಾರಿ ಚಾಲಕನನ್ನು ರಕ್ಷಿಸಿದರು. ಇವರಿಗೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸಾಥ್ ನೀಡಿದರು. ಗಾಯಾಳು ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಬಾಲಮುರುಗನ್ ಅವರನ್ನು ಚಿಕಿತ್ಸೆಗಾಗಿ ಕ್ರಿಮ್ಸ್‌ಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಚತುಷ್ಪಥ ಹೆದ್ದಾರಿ(ಎನ್ಎಚ್ 66)ಯಲ್ಲಿ 40 ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆ ಇದಾಗಿದ್ದು, ಗೋವಾದಿಂದ ಕಾರವಾರದತ್ತ ಬರುವ ವಾಹನಗಳು ಈ ಸೇತುವೆಯಲ್ಲಿ ಸಂಚರಿಸುತ್ತಿದ್ದರೆ, ನೂತನವಾಗಿ ನಿರ್ಮಿಸಿದ ಸೇತುವೆಯಲ್ಲಿ ಕಾರವಾರದಿಂದ ಗೋವಾದತ್ತ ವಾಹನಗಳು ಸಂಚರಿಸುತ್ತಿದ್ದವು. ಸೇತುವೆ ಕುಸಿಯುತ್ತಿದ್ದಂತೆ ಮಾಹಿತಿ ಪಡೆದ ಪೊಲೀಸರು ಸೇತುವೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಸ್ಥಗಿತಗೊಳಿಸಿ, ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ. ಅದರಲ್ಲೂ ಹಗಲಿನಲ್ಲಿ ಈ ದುರ್ಘಟನೆ ಸಂಭವಿಸಿದ್ದರೆ ಸೇತುವೆಯಲ್ಲಿ ವಾಹನಗಳ ಓಡಾಟದ ದಟ್ಟಣೆ ಹೆಚ್ಚಿರುವುದರಿಂದ ಭಾರೀ ದುರಂತದ ಸಾಧ್ಯತೆ ಇತ್ತು. ಶಿರೂರಿನಲ್ಲಿ ಗುಡ್ಡ ಕುಸಿತದಿಂದ 11 ಜನರ ಸಾವು, ನಿರಂತರ ಪ್ರವಾಹ, ಕುಸಿದ ಮನೆಗಳು, ಹೆದ್ದಾರಿಗಳಲ್ಲಿ ಗುಡ್ಡ ಕುಸಿತ ಹೀಗೆ ಈ ಮಳೆಗಾಲದ ದುರಂತದ ಸಾಲಿಗೆ ಈಗ ಕಾಳಿ ಸೇತುವೆಯೂ ಸೇರಿದೆ. ಘಟನೆ ನಡೆಯುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ., ಪೊಲೀಸ್ ವರಿಷ್ಠ ಎಂ. ನಾರಾಯಣ, ಶಾಸಕ ಸತೀಶ ಸೈಲ್ ಭೇಟಿ ನೀಡಿ ಪರಿಶೀಲಿಸಿದರು. ಬುಧವಾರ ಬೆಳಗ್ಗೆ 11 ಗಂಟೆ ವೇಳೆಗೆ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭೇಟಿ ನೀಡಿದರು. ಭಾರಿ ಸದ್ದು, ಭಯಭೀತರಾದ ಜನ

ಮಧ್ಯರಾತ್ರಿ ಗಾಢ ನಿದ್ದೆಯಲ್ಲಿದ್ದಾಗ ಭಾರಿ ಸದ್ದಿನೊಂದಿಗೆ ನೆಲ ಅದುರಿದಂತಾಯಿತು. ದಿಗ್ಗನೆ ಎದ್ದು ಹೊರಗೋಡಿ ಬಂದರೆ ಸೇತುವೆ ಕುಸಿದು ಬಿದ್ದಿತ್ತು. ಲಾರಿ ಬಿದ್ದಿರುವುದೂ ಕಂಡುಬಂತು. ಆ ಕ್ಷಣಕ್ಕೆ ಈ ಘಟನೆ ನಮ್ಮನ್ನು ಭಯಭೀತರನ್ನಾಗಿಸಿತು ಎಂದು ಸ್ಥಳೀಯರು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ