- ಜಿಪಂ ಸಭಾಂಗಣದಲ್ಲಿ ತಹಸೀಲ್ದಾರ್, ಶಿರಸ್ತೇದಾರರ ಜನಗಣತಿ ತರಬೇತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ ಜನಗಣತಿ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾ.4 ರಿಂದ 6 ರವರೆಗೆ ಆಯೋಜಿಸಲಾಗಿದ್ದ ತಹಸೀಲ್ದಾರ್ ಹಾಗೂ ಶಿರಸ್ತೇದಾರರಿಗೆ ಜನಗಣತಿ ತರಬೇತಿ ಕಾರ್ಯಾಗಾರ ಶುಕ್ರವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು.ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡುತ್ತಾ, ಈ ಬಾರಿಯ ಜನಗಣತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದಿನ ಸಾಮಾಜಿಕ ಮತ್ತು ಆರ್ಥಿಕ ಗಣತಿಯ ಸಮಯದಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳು ಮತ್ತು ಅವಲಂಬನೆಯನ್ನು ನೆನಪಿಸಿ ಅಧಿಕಾರಿಗಳು ಸ್ವತಃ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡು ತರಬೇತಿ ಪಡೆಯಬೇಕು ಎಂದರು. ತಾಲ್ಲೂಕು ಮಟ್ಟದಲ್ಲಿ ಗಣತಿಗಾರರಿಗೆ ತರಬೇತಿ ನೀಡುವಾಗ ಸಣ್ಣ ತಂಡಗಳನ್ನು ರಚಿಸಿಕೊಂಡು ತರಬೇತಿ ನೀಡಬೇಕು. ನೂರಾರು ಜನರ ಗುಂಪಿಗೆ ಒಟ್ಟಾಗಿ ತರಬೇತಿ ನೀಡುವ ಬದಲು, ಸಣ್ಣ ತಂಡಗಳನ್ನು ರಚಿಸಿ ಅತ್ಯಂತ ನಿಖರವಾಗಿ ತರಬೇತಿ ನೀಡಬೇಕು. ಗಣತಿಯಲ್ಲಿ ತಹಶೀಲ್ದಾರರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನಡುವೆ ಉತ್ತಮ ಸಮನ್ವಯತೆ ಇರಬೇಕು, ಯಾವುದೇ ಗೊಂದಲಗಳಿಗೆ ಒಳಗಾಗದೇ ಜನಗಣತಿಗೆ ಸಂಬಂಧಿಸಿದ ಕೈಪಿಡಿಗಳನ್ನು ಕೂಲಂಕಷವಾಗಿ ಓದಿಕೊಳ್ಳಬೇಕು. ಸಂಶಯಗಳಿದ್ದರೆ ತಾಂತ್ರಿಕ ಸಹಾಯಕರಿಂದ ತಕ್ಷಣವೇ ಬಗೆಹರಿಸಿಕೊಳ್ಳಬೇಕು. ಗಣತಿ ಪ್ರಕ್ರಿಯೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಲಭ್ಯವಿರುವ ತರಬೇತಿ ವಿಡಿಯೋಗಳನ್ನು ವೀಕ್ಷಿಸುವಂತೆ ಸೂಚಿಸಿದರು.ಸಿಇಓ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಕಳೆದ ಬಾರಿ ಜಾತಿಗಣತಿ ಸಂದರ್ಭ ಕೆಲವು ಮನೆಗಳನ್ನು ಬಿಟ್ಟುಹೋದ ಅಥವಾ ಅಪೂರ್ಣ ಮಾಹಿತಿ ನೀಡಿದ ದೂರುಗಳು ಕೇಳಿಬಂದಿದ್ದವು. ಅಂತಹ ತಪ್ಪುಗಳು ಈ ಬಾರಿ ಮರುಕಳಿಸಬಾರದು. ಸಂಗ್ರಹಿಸುವ ದತ್ತಾಂಶವು ಶೇ.100 ನಿಖರವಾಗಿರಬೇಕು. ಯಾವುದೇ ದೋಷಗಳಿಗೆ ಅವಕಾಶ ನೀಡಬಾರದು ಎಂದರು.
ಜನಗಣತಿಯ ನೋಟ:
ಭಾರತದ ಬಹುನಿರೀಕ್ಷಿತ 16ನೇ ಜನಗಣತಿ ಪ್ರಕ್ರಿಯೆಯು ಈಗ ಅಧಿಕೃತವಾಗಿ ಚಾಲನೆ ಪಡೆಯುತ್ತಿದೆ. ಇದು ದೇಶದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿಯಾಗಿದೆ. ಜನಗಣತಿಯ ಮೊದಲ ಹಂತದಲ್ಲ್ಲಿಮನೆಗಳ ಪಟ್ಟಿ ಮತ್ತು ವಸತಿ ಗಣತಿ ಕೈಗೊಳ್ಳಲಾಗುತ್ತದೆ. ಈ ವೇಳೆ ಮನೆಗಳ ಸಂಖ್ಯೆ, ಗೋಡೆ, ಛಾವಣಿ ನಿರ್ಮಾಣಕ್ಕೆ ಬಳಸಿದ ವಸ್ತುಗಳು, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಮತ್ತು ಮನೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಹಂತ 2ರಲ್ಲಿ ಜನಸಂಖ್ಯಾ ಗಣತಿಯು ನಡೆಯಲಿದೆ. ಈ ಹಂತದಲ್ಲಿ ಪ್ರತಿ ವ್ಯಕ್ತಿಯ ವಯಸ್ಸು, ಲಿಂಗ, ಶಿಕ್ಷಣ, ಉದ್ಯೋಗ, ಧರ್ಮ ಮತ್ತು ಭಾಷೆಯಂತಹ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.ಗಣತಿಯು ಹಿಂದಿನಂತೆ ಕಾಗದದ ಫಾರಂಗಳನ್ನು ಬಳಸುವ ಬದಲು, ಈ ಬಾರಿ ಸಂಪೂರ್ಣ ತಂತ್ರಜ್ಞಾನ ಬಳಸಲಾಗುತ್ತಿದೆ. ಮೊಬೈಲ್ ಆ್ಯಪ್ ಮೂಲಕ ಗಣತಿದಾರರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿರುವ ವಿಶೇಷ ಆ್ಯಪ್ ಮೂಲಕ ದತ್ತಾಂಶ ಸಂಗ್ರಹಿಸುತ್ತಾರೆ. ಜನಗಣಿತಿಯು ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ **(RGCC) ** ಕೇಂದ್ರಮಟ್ಟದಲ್ಲಿ ಇಡೀ ದೇಶದ ಗಣತಿಯ ಮುಖ್ಯಸ್ಥರಾಗಿರುವರು. ರಾಜ್ಯ ಜನಗಣತಿ ನಿರ್ದೇಶಕರು **(Director of Census Operations)** ರಾಜ್ಯಮಟ್ಟದ ಉಸ್ತುವಾರಿ ಆಗಿರುವರು ಎಂದರು.
ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಜಿಲ್ಲಾಧಿಕಾರಿ ಈ ಜವಾಬ್ದಾರಿ ಹೊಂದಿರುತ್ತಾರೆ. ಉಪ ಜಿಲ್ಲಾ ಅಧಿಕಾರಿಗಳಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಕಾರ್ಯನಿರ್ವಹಿಸುವರು. ಜನಗಣತಿ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದು, ಗಣತಿದಾರರು ಮನೆಮನೆಗೆ ಭೇಟಿ ನೀಡಿ ಗಣತಿ ಕಾರ್ಯ ನಡೆಸುವರು ಎಂದು ತಿಳಿಸಿದರು.ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಹೊನ್ನಾಳಿ ಉಪವಿಭಾಗಾಧಿಕಾರಿ ಚನ್ನಪ್ಪ, ಜನಗಣತಿ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿ ವಿವೇಕ್ ಸಿನ್ಹಾ, ಜನಗಣತಿ ಇಲಾಖೆ ಶರ್ಮಾ, ಸಾಜಿದ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
- - --6ಕೆಡಿವಿಜಿ47.ಜೆಪಿಜಿ:
ದಾವಣಗೆರೆಯಲ್ಲಿ ತಹಸೀಲ್ದಾರ್ ಹಾಗೂ ಶಿರಸ್ತೇದಾರರ ಜನಗಣತಿ ತರಬೇತಿ ಕಾರ್ಯಾಗಾರ ನಡೆಯಿತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಇತರರು ಇದ್ದರು.