ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬೂದನೂರು ಗ್ರಾಪಂ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದಕ್ಕೆ ಪಂಚಾಯ್ತಿಗೆ ನಷ್ಟ ಉಂಟುಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮಂಡ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ನೀಡಿರುವುದು ಸ್ವಾಗತಾರ್ಹ. ಅದೇ ರೀತಿ ಸೆಸ್ಕಾಂ ಜಾಗೃತದಳದ ವರದಿಯಲ್ಲಿರುವ ೩೮೬ ಪ್ರಕರಣಗಳಿಗೂ ಇದೇ ಮಾನದಂಡ ಅನುಸರಿಸಬೇಕು. ಸೆಸ್ಕಾಂನವರು ವಿದ್ಯುತ್ ಬಿಲ್ ಜೊತೆಗೆ ದಂಡದ ಮೊತ್ತ ಸೇರಿಸದಂತೆ ತಡೆಹಿಡಿಯುವಂತೆ ಆಗ್ರಹಿಸಿದರು.
ಅನಧಿಕೃತ ವಿದ್ಯುತ್ ಸಂಪರ್ಕಕ್ಕೆ ವಿಧಿಸಲಾಗುವ ದಂಡದ ಮೊತ್ತವನ್ನು ಪ್ರತ್ಯೇಕವಾಗಿರಿಸಿ ಅದನ್ನು ಪಿಡಿಒ, ಕಾರ್ಯದರ್ಶಿ, ಬಿಲ್ ಕಲೆಕ್ಟರ್‌ಗಳ ವೇತನದಿಂದ ಕಟಾವು ಮಾಡಿಕೊಳ್ಳುವುದಕ್ಕೆ ಜಿಪಂ ಸಿಇಒ ಅವರು ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.ಸೆಸ್ಕಾಂ ಜಾಗೃತದಳದ ವರದಿಯನುಸಾರ ೩೮೬ ಪ್ರಕರಣಗಳಲ್ಲಿ ಬಹುತೇಕ ಗ್ರಾಪಂಗಳಿಂದ ದಂಡ ವಸೂಲಿಯಾಗಿದ್ದು, ಉಳಿದ ೫೪ ಪ್ರಕರಣಗಳಲ್ಲಿ ದಂಡ ವಸೂಲಿಯಾಗಬೇಕಿದೆ. ಸುಮಾರು ೫೦ ಲಕ್ಷಕ್ಕೂ ಹೆಚ್ಚು ದಂಡದ ಹಣ ಬಾಕಿ ಇದ್ದು, ಇದನ್ನು ಪಂಚಾಯ್ತಿಯ ಅಧಿಕಾರಿಗಳಿಂದಲೇ ವಸೂಲಿ ಮಾಡುವಂತೆ ಒತ್ತಾಯಿಸಿದರು.
ನರೇಗಾ ಹಾಜರಾತಿಯಲ್ಲಿ ಲೋಪ:೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ೪೫೮೨ ಸಮುದಾಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬೆಳಗಿನ ಅವಧಿಯಲ್ಲಿ ಕೂಲಿಕಾರರ ಹಾಜರಾತಿಯ ಒಟ್ಟು ೩,೦೮,೯೧೫ ಫೋಟೋಗಳನ್ನು ಸೆರೆಹಿಡಿಯಲಾಗಿದೆ. ಅದರಲ್ಲಿ ಬೆಳಗ್ಗೆ ಮತ್ತು ಸಂಜೆ ಅವಧಿಯಲ್ಲಿ ಸೆರೆಹಿಡಿಯಲಾದ ಒಟ್ಟು ೧,೭೦,೫೯೬ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿರುತ್ತದೆ. ಆದರೆ, ಒಟ್ಟು ೧,೩೭,೭೧೯ ಪೋಟೋಗಳನ್ನು ಬೆಳಗಿನ ಅವಧಿಯಲ್ಲಿ ಮಾತ್ರ ಸೆರೆಹಿಡಿಯಲಾಗಿತ್ತು. ಎರಡನೇ ಬಾರಿ ಸೆರೆಹಿಡಿಯದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ದಾಖಲೆ ಮುಖಾಂತರ ಕಂಡುಬಂದಿದೆ ಎಂದರು.
ಕೆ.ಆರ್.ಪೇಟೆ ತಾಲೂಕಿನಲ್ಲಿ ೨೨೮೧೨, ಮದ್ದೂರು ತಾಲೂಕಿನಲ್ಲಿ ೨೮೯೫೦, ಮಳವಳ್ಳಿ ತಾಲೂಕಿನಲ್ಲಿ ೩೩೦೫೨, ಮಂಡ್ಯ ತಾಲೂಕಿನಲ್ಲಿ ೧೧,೩೦೬, ನಾಗಮಂಗಲ ತಾಲೂಕಿನಲ್ಲಿ ೨೯,೯೨೩, ಪಾಂಡವಪುರ ತಾಲೂಕಿನಲ್ಲಿ ೬೨೨೩ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ೫೪೫೩ ಫೋಟೋಗಳನ್ನು ಒಟ್ಟು ೧,೩೭,೭೧೯ ಫೋಟೋಗಳನ್ನು ಬೆಳಗಿನ ಅವಧಿಯಲ್ಲಿ ಮಾತ್ರ ಸೆರೆಹಿಡಿಯಲಾಗಿದೆ. ಎರಡನೇ ಬಾರಿ ಸೆರೆಹಿಡಿಯದೆ ಸರ್ಕಾರದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆದರೂ ಈ ವಿಷಯವಾಗಿ ನರೇಗಾ ಇಂಜಿನಿಯರ್‌ಗಳು ಸೇರಿದಂತೆ ಯಾರೊಬ್ಬರ ವಿರುದ್ಧವೂ ಜಿಪಂ ಸಿಇಒ ಅವರು ಕ್ರಮ ಕೈಗೊಂಡಿಲ್ಲ. ನರೇಗಾ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಹಲವಾರು ಜನರು ದೂರು ನೀಡಿದ್ದರೂ ಯಾವುದಕ್ಕೂ ಕ್ರಮ ವಹಿಸಿಲ್ಲವೆಂದು ದೂರಿದರು.ಗೋಷ್ಠಿಯಲ್ಲಿ ಗೋಪಾಲಪುರ ಗ್ರಾಪಂ ಉಪಾಧ್ಯಕ್ಷ ಕೆಂಪಾಚಾರಿ ಇದ್ದರು.