ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಶಿಕ್ಷಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಕೋತಿ ತೋಪು ವೃತ್ತದ ಬಳಿ ಸೋಮವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪರಿಶಿಷ್ಟ ಜಾತಿಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿ-ಗತಿಗಳ ವಾಸ್ತವಾಂಶವನ್ನು ಅರಿಯಲು ರಾಜ್ಯದಾದ್ಯಂತ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಜಾತಿ ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈಗಾಗಲೇ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳ ಸಮೀಕ್ಷೆ ನಡೆಸಲು 3 ಸಾವಿರ ಶಿಕ್ಷಕರನ್ನು ಗಣತಿದಾರರನ್ನಾಗಿ ನಿಯೋಜಿಸಲಾಗಿದೆ. ಸಮೀಕ್ಷೆಯು 3 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಗಣತಿದಾರರು ಮೇ 5 ರಿಂದ 17ರವರೆಗೆ ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.2ನೇ ಹಂತದಲ್ಲಿ ಮೇ 19 ರಿಂದ 21ರವರೆಗೆ ಆಯಾ ಮತಗಟ್ಟೆಗಳಲ್ಲಿ ಸಮೀಕ್ಷೆ ನಡೆಸಲಾಗುವುದು. ಪ್ರವಾಸದಲ್ಲಿರುವವರು, ವಿವಿಧ ಕಾರಣಗಳಿಂದ ಮನೆಯಿಂದ ಹೊರಗಿರುವವರು ಈ ಹಂತದಲ್ಲಿ ಸಂಬಂಧಿಸಿದ ಮತಗಟ್ಟೆಗಳಿಗೆ ಭೇಟಿ ನೀಡಿ ತಮ್ಮ ಜಾತಿಯ ವಿವರಗಳನ್ನು ದಾಖಲಿಸಬಹುದು ಎಂದು ತಿಳಿಸಿದರು.
ಗಣತಿದಾರರು ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬ ಸದಸ್ಯರು ತಮ್ಮ ಆಧಾರ್ ಮತ್ತು ಪಡಿತರ ಚೀಟಿಯನ್ನು ಹಾಜರುಪಡಿಸಿ ಜಾತಿಯ ಬಗ್ಗೆ ನಿಖರ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಯಾವುದೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇನ್ನಿತರೆ ದಾಖಲೆಗಳ ಅಗತ್ಯವಿರುವುದಿಲ್ಲ. ಜಾತಿ ಸಮೀಕ್ಷೆಯಲ್ಲಿ ಮಾಹಿತಿ ನೀಡುವುದರಿಂದ ಸರ್ಕಾರದ ಸೌಲಭ್ಯಗಳಿಂದ ಯಾರೂ ವಂಚಿತರಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಿದ್ದು, ಗಣತಿದಾರರು ಸಮೀಕ್ಷೆ ನಡೆಸಲು ಮನೆ-ಮನೆಗೆ ಭೇಟಿ ನೀಡಿದಾಗ ಪರಿಶಿಷ್ಟ ಜಾತಿ ಸಮುದಾಯದವರು ತಮ್ಮ ಉಪ ಜಾತಿಗಳ ನಿಖರ ಮಾಹಿತಿಯನ್ನು ನೀಡುವ ಮೂಲಕ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ಸಹಕರಿಸಬೇಕು ಎಂದರು.