ಧಾರವಾಡ ಜಿಲ್ಲೆಗೆ 50 ಸಾವಿರ ಮೆಟ್ರಿಕ್ ಟನ್ ಹಸಿ ಮೇವು ಬೇಡಿಕೆ
35 ಸಾವಿರ ಕಿಟ್ ಲಭ್ಯ, ಒಣ ಮೇವು ಸಂಗ್ರಹಕ್ಕೂ ಚಾಲನೆ
ಬಸವರಾಜ ಹಿರೇಮಠಕನ್ನಡಪ್ರಭ ವಾರ್ತೆ ಧಾರವಾಡ
ಪ್ರಸ್ತುತ ಸುಮಾರು 10 ಸಾವಿರ ಟನ್ ಮೇವಿದ್ದರೂ ಬರುವ ಬೇಸಿಗೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಮೇವಿನ ಕೊರತೆ ಉಂಟಾಗದಂತೆ ಎಚ್ಚರ ವಹಿಸಲು ಸರ್ಕಾರದ ನಿರ್ದೇಶನದಂತೆ ಈಗಿನಿಂದಲೇ ಮೇವು ಸಂಗ್ರಹದಲ್ಲಿ ಇಲಾಖೆ ತೊಡಗಿಕೊಂಡಿದೆ.
ಅಂಕಿ-ಅಂಶಗಳ ಪ್ರಕಾರ, ಧಾರವಾಡ ಜಿಲ್ಲೆಯಲ್ಲಿ 2.33 ಲಕ್ಷ ದನಕರುಗಳಿದ್ದು, 1.53 ಲಕ್ಷ ಕುರಿ-ಮೇಕೆಗಳಿವೆ. ಬರಗಾಲದ ಸಮಯದಲ್ಲಿ ಅಂದಾಜು 50 ಸಾವಿರ ಟನ್ ಮೇವಿನ ಕೊರತೆ ಆಗುವ ಹಿನ್ನೆಲೆಯಲ್ಲಿ ಅಷ್ಟು ಪ್ರಮಾಣ ಮೇವವನ್ನು ಬೇರೆ ಬೇರೆ ವಿಧಗಳಲ್ಲಿ ಸಂಗ್ರಹಿಸಲು ಇಲಾಖೆಯು ಕ್ರಮ ಕೈಗೊಂಡಿದೆ. ಅಲ್ಲದೇ, ಮೇವು ಕೊರತೆ ನೀಗಿಸಲು ಸರ್ಕಾರದಿಂದ ₹16.20 ಕೋಟಿ ಅನುದಾನ ಸಹ ಕೋರಿದೆ. ಜಿಲ್ಲೆಗೆ 45 ಸಾವಿರ ಮೇವಿನ ಬೀಜಗಳ ಕಿರುಪೊಟ್ಟಣಗಳ ಬೇಡಿಕೆ ಇದ್ದು ಈಗಾಗಲೇ 35 ಸಾವಿರ ಕಿಟ್‌ಗಳನ್ನು ರೈತರಿಗೆ ಹಂಚಲಾಗಿದೆ. ಜಿಲ್ಲೆಯ ವಿವಿಧೆಡೆ ಹಸಿ ಮೇವು ಸಹ ಬೆಳೆಯಲಾಗಿದೆ. ಬೇಡಿಕೆಗೆ ತಕ್ಕಂತೆ ಹಂತ ಹಂತವಾಗಿ ಇನ್ನೂ ಹತ್ತು ಸಾವಿರ ಮೇವಿನ ಬೀಜಗಳ ಕಿರುಪೊಟ್ಟಣಗಳನ್ನು ರೈತರಿಗೆ ನೀಡಲು ಇಲಾಖೆ ಚಿಂತಿಸಿದೆ.
ಜೊತೆಗೆ ಜಿಲ್ಲೆಯಲ್ಲಿ ಎಂಟು ಮೇವು ಬ್ಯಾಂಕ್ ತೆರೆಯಲಾಗುತ್ತಿದ್ದು, ಒಣ ಮೇವಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಟೆಂಡರ್ ಕರೆಯಲಾಗಿದ್ದು ರೈತರು ಒಣ ಮೇವನ್ನು ಇಲಾಖೆಗೆ ನೀಡಬಹುದು. ಕಲಘಟಗಿ, ಅಳ್ನಾವರ, ಧಾರವಾಡ ಭಾಗಶಃ ಅಷ್ಟೊಂದು ಮೇವಿನ ಸಮಸ್ಯೆ ಆಗುವುದಿಲ್ಲ. ಆದರೆ, ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ಭಾಗದ ಜಾನುವಾರುಗಳಿಗೆ ಸಾಮಾನ್ಯವಾಗಿ ಬರ ಸಮಯದಲ್ಲಿ ಮೇವಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಅಲ್ಲಿ ಒಣ ಮೇವಿನ ಸಂಗ್ರಹಣೆ ಶುರು ಮಾಡಲಾಗುತ್ತಿದೆ. ಯಾವುದೇ ರೈತರು ತಮ್ಮ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾದರೆ ಪಶು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ನೀಡಿದರೆ ದಿನಕ್ಕೆ ಆರು ಕೆಜಿಯಂತೆ ರೈತರಿಗೆ ಮೇವು ಒದಗಿಸುವ ಕಾರ್ಯವನ್ನು ಇಲಾಖೆ ಮಾಡಲಿದೆ ಎಂದು ಮಾಹಿತಿ ನೀಡಿದರು.
ತಾಲೂಕು ವಿತರಣೆ ಮಾಡಿರುವ ಮೇವಿನ ಬೀಜಗಳ ಕಿರುಪೊಟ್ಟಣಗಳ ಸಂಖ್ಯೆ
ಹುಬ್ಬಳ್ಳಿ 6469
ಕುಂದಗೋಳ 5598
ನವಲಗುಂದ-ಅಣ್ಣಿಗೇರಿ 5632ಒಟ್ಟು 35581