ಲಕ್ಕಿ ಸ್ಕೀಂ ಹೆಸರಲ್ಲಿ ಹಣ ಸಂಗ್ರಹ: ಐವರು ಪೊಲೀಸ್ ವಶಕ್ಕೆ

KannadaprabhaNewsNetwork |  
Published : Feb 18, 2025, 12:32 AM IST
ಚಿತ್ರ : 17ಎಂಡಿಕೆ4 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾತನಾಡಿದರು. | Kannada Prabha

ಸಾರಾಂಶ

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ಜ.30ರಿಂದ ಎಸ್‌ವಿ ಸ್ಮಾರ್ಟ್‌ ವಿಷನ್‌ ಎಂಬ ಹೆಸರಿನಲ್ಲಿ ಮಡಿಕೇರಿ ನಗರ ನಿವಾಸಿಗಳಾದ ಅಶ್ರಫ್, ಸುಲೈಮಾನ್, ಅಬ್ದುಲ್ ಗಫೂರ್, ಆಕ್ರಮ್ ಹಾಗೂ ಕಿಶೋರ್ ಎಂಬವರು ಹಣವನ್ನು ಸಂಗ್ರಹಿಸುತ್ತಿದ್ದು, ಸ್ಕೀಮ್‌ನಲ್ಲಿ ಈಗಾಗಲೇ 1100ಕ್ಕೂ ಹೆಚ್ಚು ಜನರು ಸೇರಿರುತ್ತಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಯಾವುದೇ ದಾಖಲೆಗಳಿಲ್ಲದೆ ಸ್ಕೀಂ ಹೆಸರಲ್ಲಿ ಹಣ ಸಂಗ್ರಹ ಮಾಡುತ್ತಿದ್ದ ಐವರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ಜ.30ರಿಂದ ಎಸ್‌ವಿ ಸ್ಮಾರ್ಟ್‌ ವಿಷನ್‌ ಎಂಬ ಹೆಸರಿನಲ್ಲಿ ಮಡಿಕೇರಿ ನಗರ ನಿವಾಸಿಗಳಾದ ಅಶ್ರಫ್, ಸುಲೈಮಾನ್, ಅಬ್ದುಲ್ ಗಫೂರ್, ಆಕ್ರಮ್ ಹಾಗೂ ಕಿಶೋರ್ ಎಂಬವರು ಹಣವನ್ನು ಸಂಗ್ರಹಿಸುತ್ತಿದ್ದು, ಸ್ಕೀಮ್‌ನಲ್ಲಿ ಈಗಾಗಲೇ 1100ಕ್ಕೂ ಹೆಚ್ಚು ಜನರು ಸೇರಿರುತ್ತಾರೆ.

ಸ್ಕೀಂಗೆ ಸೇರಲು ಒಬ್ಬರೂ ಪ್ರತಿ ತಿಂಗಳು 1,000 ರು.ನಂತೆ 24 ಕಂತುಗಳನ್ನು ಗ್ರಾಹಕರು ಕಟ್ಟಬೇಕಾಗಿರುತ್ತದೆ. ಪ್ರತಿ ತಿಂಗಳ 30ನೇ ತಾರೀಕಿನಂದು ಸಂಜೆ 5 ಘಂಟೆಗೆ ರಾಣಿಪೇಟೆಯಲ್ಲಿರುವ ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪದಲ್ಲಿ ಲಕ್ಕಿ ಡ್ರಾ ಮಾಡಿ ಫಲಿತಾಂಶವನ್ನು ವಾಟ್ಸಾಪ್‌ ಗ್ರೂಪ್ ಮೂಲಕ ತಿಳಿಸಿ ಬಹುಮಾನವನ್ನು 50-60 ದಿನಗಳಲ್ಲಿ ಗ್ರಾಹಕರಿಗೆ ನೀಡಲಾಗುವುದು. 20 ತಿಂಗಳ ಲಕ್ಕಿ ಡ್ರಾನಲ್ಲಿ ಒಟ್ಟು 96 ಜನರಿಗೆ ವಿವಿಧ ರೀತಿಯ ಬಹುಮಾನವನ್ನು ನೀಡುವುದಾಗಿ ತಿಳಿಸಿರುತ್ತಾರೆ ಎಂದು ವಿವರಿಸಿದರು.

ಮೊದಲನೇ ತಿಂಗಳ ಬಹುಮಾನವಾಗಿ ಒಬ್ಬರಿಗೆ ಥಾರ್ ಜೀಪ್ ಹಾಗೂ 8 ಜನರಿಗೆ ಬೈಕ್ ನೀಡಬೇಕಾಗಿದ್ದು, ಥಾರ್ ಜೀಪ್ ಬದಲಾಗಿ 7,60,000 ರು.ಗಳು ಮತ್ತು 7 ಜನರಿಗೆ 43,000 ರು.ಗಳ ಚೆಕ್ ನೀಡಿರುತ್ತಾರೆ. ಈ ಸ್ಕೀಂ ನಡೆಸುವವರು ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದದೆ, ವಂಚನೆ ಮಾಡುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದು, ಸ್ಕೀಂನ ಪ್ರತಿನಿಧಿಗಳಾದ ಅಶ್ರನ್, ಸುಲೈಮಾನ್, ಅಬ್ದುಲ್ ಗಫೂರ್, ಅಕ್ರಮ್ ಹಾಗೂ ಕಿಶೋರ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣದ ತನಿಖೆಯನ್ನು ಮಡಿಕೇರಿ ಉಪವಿಭಾಗ ಡಿಎಪಿ ಸೂರಜ್ ಪಿ.ಎ., ಮಡಿಕೇರಿ ನಗರ ವೃತ್ತ ರಾಜು ಪಿ.ಕೆ., ಪಿಎಸ್‌ಐ ಶ್ರೀಧರ ಸಿ.ಎ., ಪಿಎಸ್‌ಐ ರಾಧ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಠಾಣೆಯ ಅಪರಾಧ ಪತ್ತೆ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ 5 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಹೇಳಿದರು.

ಮಂಗಳೂರು ಸುರತ್ಕಲ್‌ನ ಕೃಷ್ಣಪುರದ 6ನೇ ಬ್ಲಾಕ್‌ನ ಮಹಮ್ಮದ್ ಆಶ್ರಫ್ (37), ಮಡಿಕೇರಿ ಮಲ್ಲಿಕಾರ್ಜುನ ನಗರದ ಸುಲೈಮಾನ್ ಎಂ.ವೈ. (37), ಮಡಿಕೇರಿ ತ್ಯಾಗರಾಜ ಕಾಲನಿಯ ಅಬ್ದುಲ್ ಗಫೂರ್ (34), ಮೊಹಮ್ಮದ್ ಅಕ್ರಂ (34), ಮಡಿಕೇರಿ ಕುಂಬಳಕೇರಿ ಉಕ್ಕುಡದ ಕಿಶೋರ್ ಎಚ್.ಎನ್.(41) ಬಂಧಿತ ಆರೋಪಿಗಳು.

ಎಸ್‌ವಿ ಸ್ಮಾರ್ಟ್‌ ವಿಷನ್‌ ಎಂಬ ಹೆಸರಿನ ಸ್ವೀಮ್‌ನಲ್ಲಿ ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾದವರು ಸೂಕ್ತ ದಾಖಲಾತಿಗಳೊಂದಿಗೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಹಾಜರಾಗುವಂತೆ ರಾಮರಾಜನ್ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ