ಕಲೆಕ್ಷನ್‌ ಫುಲ್, ಸರ್ಕಾರದ ಗಲ್ಲೆ ಖಾಲಿ ಖಾಲಿ -ಶಾಸಕ ಪಾಟೀಲ ಟೀಕೆ

KannadaprabhaNewsNetwork |  
Published : Jul 06, 2025, 01:48 AM IST
(5ಎನ್.ಆರ್.ಡಿ1 ವಿವಿಧ ಭೂಮಿ ಪೂಜಾ ಕಾರ್ಯಕ್ರಮದ ಸಮಾರಂಭದಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡುತ್ತಿದ್ದಾರೆ.)   | Kannada Prabha

ಸಾರಾಂಶ

ಟಾಕೀಸ್ ಕಲೆಕ್ಷನ್‌ ಫುಲ್ ಗಲ್ಲೆ ಖಾಲಿ ಎನ್ನುವಂತಿರುವ ಕಾಂಗ್ರೆಸ್‌ ಸರಕಾರದಿಂದ ಅಭಿವೃದ್ಧಿ ಶೂನ್ಯ. ಜನರ ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ನನ್ನ ಸುದೀರ್ಘ ರಾಜಕೀಯ ಅನುಭವದಲ್ಲಿ ಅಭಿವೃದ್ಧಿ ಮಾಡದ ಕಾಂಗ್ರೆಸ್‌ದಂತಹ ದರಿದ್ರ, ಕೆಟ್ಟ ಸರಕಾರವನ್ನು ಕಂಡಿಲ್ಲವೆಂದು ಶಾಸಕ ಸಿ. ಸಿ .ಪಾಟೀಲ ವಾಗ್ದಾಳಿ ನಡೆಸಿದರು.

ನರಗುಂದ: ಟಾಕೀಸ್ ಕಲೆಕ್ಷನ್‌ ಫುಲ್ ಗಲ್ಲೆ ಖಾಲಿ ಎನ್ನುವಂತಿರುವ ಕಾಂಗ್ರೆಸ್‌ ಸರಕಾರದಿಂದ ಅಭಿವೃದ್ಧಿ ಶೂನ್ಯ. ಜನರ ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ನನ್ನ ಸುದೀರ್ಘ ರಾಜಕೀಯ ಅನುಭವದಲ್ಲಿ ಅಭಿವೃದ್ಧಿ ಮಾಡದ ಕಾಂಗ್ರೆಸ್‌ದಂತಹ ದರಿದ್ರ, ಕೆಟ್ಟ ಸರಕಾರವನ್ನು ಕಂಡಿಲ್ಲವೆಂದು ಶಾಸಕ ಸಿ. ಸಿ .ಪಾಟೀಲ ವಾಗ್ದಾಳಿ ನಡೆಸಿದರು.

ಶನಿವಾರ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಸೇರಿದಂತೆ ರು. 2.90 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದ ನಂತರದ ಸಮಾರಂಭದಲ್ಲಿ ಮಾತನಾಡಿದರು.

ಅಭಿವೃದ್ಧಿ ಕುರಿತಾಗಿ ಕಾಂಗ್ರೆಸ್ ಸರಕಾರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಈ ದಿನ ಉದ್ಘಾಟನೆಗೊಂಡ ಕಟ್ಟಡಗಳೆಲ್ಲ ನಮ್ಮ ಬಿಜೆಪಿ ಸರಕಾರ ಅವಧಿಯಲ್ಲಿ ನಾನು ಸಚಿವನಾಗಿದ್ದಾಗ ಹೆಚ್ವಿನ ಅನುದಾನ ನೀಡಿದ್ದರಿಂದ ಇವತ್ತು ಎಲ್ಲ ಕಾಮಗಾರಿಗಳು ಸಂಪೂರ್ಣಗೊಂಡು ಉದ್ಘಾಟನೆಗೊಂಡಿವೆ. ಕೆಪಿಎಸ್ ನೂತನ ಕಟ್ಟಡದ ಕಾರಿಡಾರನಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಸಕರ ಅನುದಾನದಲ್ಲಿ ಗ್ರಿಲ್ ಹಾಕಿಸಿಕೊಡುತ್ತೇನೆ ಎಂದರು. ಗ್ರಾಮದ ಮಹಿಳಾ ಸಂಘದವರು ಹಳ್ಳಿ ರುಚಿ ಎಂಬ ಶ್ಯಾವಿಗೆ ತಯಾರಿಸುವ ಘಟಕ ಪ್ರಾರಂಭಿಸಿದ್ದು, ಶ್ಯಾವಿಗೆ ಪಾಕೀಟುಗಳನ್ನು ಶಾಸಕರು ವೇದಿಕೆಯಲ್ಲಿ ಪ್ರದರ್ಶಿಸಿದರು. ಶ್ಯಾವಿಗೆ ತಯಾರಿ ಘಟಕವು ಸ್ವಾವಲಂಬಿ ಬದುಕಿಗೆ ದಾರಿಯಾಗಿದೆ. ಕೇವಲ ಇಬ್ಬರು ಭಾರತ ದೇಶದ ಮಹಿಳಾ ಅಧಿಕಾರಿಗಳು, ಪಾಕಿಸ್ತಾನದ ಮೇಲೆ ನಡೆದ ದಾಳಿಯ ಸಂಪೂರ್ಣ ಮಾಹಿತಿಯನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿ ಹೇಳಿ ಪಾಕ್‌ನ ಬಂವಾಳ ಬಿಚ್ಚಿಟ್ಟಿದ್ದಾರೆ. ಹಾಗೆಯೇ ಗ್ರಾಮೀಣ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಖುವ ಮೂಲಕ ಯಶಸ್ವಿ ಜೀವನ ನಡೆಸುತ್ತಿದ್ದಾರೆಂದು ಅಭಿಮಾನ ವ್ಯಕ್ತಪಡಿಸಿದರು.

ನನ್ನ ರಾಜಕೀಯ ಜೀವನದಲ್ಲಿ 6 ಖಾತೆಗಳನ್ನು ನಿಭಾಯಿಸಿದ ಅನುಭವ ನನಗಿದೆ. ಕ್ಷೇತ್ರದ ಅಭಿವೃದ್ಧಿಗೆ ಈಗಲೂ ಸಿದ್ಧನಿದ್ದೇನೆ. ಆದರೆ ಟೋಲ್ ನಾಕಾದಂತೆ ಕಮೀಷನ್ ವಸೂಲಿ ಮಾಡುವವರ ಕಾಟ ಹೆಚ್ಚಾಗಿದೆ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ. ವೈದ್ಯಕೀಯ ಇಲಾಖೆಗೆ ಆಗಮಿಸಿದ ನೂತನ ವೈದ್ಯರೊಬ್ಬರಿಂದ ಕಾಂಗ್ರೆಸ್‌ ಪ್ರಭಾವಿ ನಾಯಕರೊಬ್ಬರು ರು. 35 ಸಾವಿರ ವಸೂಲಿ ಮಾಡಿದ್ದಾರೆ. ತಾಲೂಕಿಗೆ ಹೊಸದಾಗಿ ಯಾರೇ ಅಧಿಕಾರಿ ಬಂದರೂ ಇವರಿಗೆ ಕಮಿಷನ್ ಕೊಡಲೇಬೇಕು. ಇಂತಹ ಸಂಗತಿಗಳನ್ನು ಎತ್ತಿ ಹಿಡಿದರೆ, ವೇದಿಕೆಯಲ್ಲಿ ಸಾರ್ವಜನಿಕವಾಗಿ ಮಾತನಾಡೋಣ ಬರ್ರಿ ಎಂಬ ಉಡಾಫೆ ಉತ್ತರವನ್ನು ನೀಡುತ್ತಾರೆ. ಮತದಾರರು ಎಲ್ಲವನ್ನು ನೋಡುತ್ತಿದ್ದಾರೆ. ಎಲ್ಲದಕ್ಕೂ ಸಮಯವಿದೆ ಕಾದು ನೋಡೋಣ ಎಂದರು.

ಗ್ರಾಪಂ ಸದಸ್ಯ ಶರಣಪ್ಪ ಹಳೇಮನಿ ಮಾತನಾಡಿ, ನೂತನ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಸಾರವಾಗಿ ಕೊಠಡಿಗಳ ಕೊರತೆ ಎದ್ದು ಕಾಣುತ್ತಿದೆ. ಶಾಲಾ ಕಟ್ಟಡ ಕಾರಿಡಾರ ಎತ್ತರದಲ್ಲಿರುವ ಕಾರಣ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಗ್ರಿಲ್ ಹಾಕಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡ ರು. 1.51 ಕೋಟಿ, ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ರು. 49.98 ಲಕ್ಷ, ಅಂಗನವಾಡಿ ಕೇಂದ್ರ-106 ಕಟ್ಟಡ ಕಾಮಗಾರಿಗೆ ರು. 10 ಲಕ್ಷ, ನರಗುಂದ-ಚಿಕ್ಕನರಗುಂದ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ರು. 50 ಲಕ್ಷ, ಮಹಿಳಾ ವರ್ಕ ಶಾಪ್ ಹಾಗೂ ಗೋದಾಮು ನಿರ್ಮಾಣಕ್ಕೆ ರು. 25 ಲಕ್ಷ, ಹಾಗೂ ಗಜಾನನ ಸಮುದಾಯ ಭವನಕ್ಕೆ ರು. 5 ಲಕ್ಷ ಹೀಗೆ ಎಲ್ಲ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿತು. ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಪ್ರಕಾಶಗೌಡ ತಿರಕನಗೌಡ್ರ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಮುತ್ತು ರಾಯರಡ್ಡಿ, ಶಿವಪ್ಪ ಗಣೇಶ, ರುದ್ರಗೌಡ ರಾಚನಗೌಡ್ರ, ದೇಸಾಯಿಗೌಡ ಪಾಟೀಲ, ಶಿವಾನಂದ ಸಾತನ್ನವರ, ಜಡಿಯಪ್ಪಗೌಡ ಚನ್ನವೀರಗೌಡ್ರ, ಹನುಮಂತ ಬಾಚಿ, ಬಸವರಾಜ ತಳವಾರ, ಗುರಪ್ಪ ಆದೆಪ್ಪನವರ, ಬಿ.ಎಸ್. ಪಾಟೀಲ, ಗ್ರಾಪಂ ಸರ್ವ ಸದಸ್ಯರು, ಬಿಇಓ ಡಾ. ಗುರುನಾಥ ಹೂಗಾರ, ತಾಪಂ ಇಓ ಎಸ್. ಕೆ .ಇನಾಮದಾರ, ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ