ಕುಂದಾಪುರ: ಕುಂದಾಪ್ರ ಕನ್ನಡ ಭಾಷೆ, ಅದರ ಸಂಸ್ಕೃತಿ, ಪರಂಪರೆ ಹಾಗೂ ಸ್ಥಳೀಯ ಜೀವನಶೈಲಿ ಉಳಿಸಿ ಬೆಳೆಸಲು ಮನೆ, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕುಂದಾಪ್ರ ಕನ್ನಡ ಅಧ್ಯಯನ ಪೀಠ ಸದಸ್ಯ, ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.ಕುಂದಾಪ್ರ ಕನ್ನಡ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ, ಸುಜ್ಞಾನ ಪಿಯು ಕಾಲೇಜು ಯಡಾಡಿ-ಮತ್ಯಾಡಿ ಪ್ರಸ್ತುತಿಯಲ್ಲಿ, ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ವನ್ನು ತಿರಿಗೆ ಸೇರಿನ ಮೂಲಕ ಭತ್ತ ತುಂಬಿಸಿ ಮತ್ತು ವಾಲ್ಬೆಲ್ಲದ ಸಿಹಿ ಹಂಚಿ ವಿಭಿನ್ನವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಕುಂದಾಪ್ರ ಕನ್ನಡ ಅಧ್ಯಯನ ಪೀಠ ಮೂಲಕ ಕುಂದಾಪ್ರ ಕನ್ನಡ ಕುರಿತು ಉನ್ನತ ಮಟ್ಟದ ಸಂಶೋಧನೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ, ಭಾಷೆಯ ಬೆಳವಣಿಗೆಗೆ ಅಗತ್ಯ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿತ್ರನಟಿ, ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ, ಕನಸುಗಳಿಗೆ ವಯಸ್ಸಿನ ಮಿತಿಯಿಲ್ಲ. ಛಲ, ಹಠ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ವಯಸ್ಸಿನಲ್ಲೂ ಯಶಸ್ಸು ಸಾಧಿಸಬಹುದು ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ರಾಜು ಮೊಗವೀರ ಮಾತನಾಡಿ, ಮಾತೃಭಾಷೆ ಹಾಗೂ ಸ್ಥಳೀಯ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ವಿದ್ಯಾರ್ಥಿಗಳೇ ಪ್ರಮುಖ ಶಕ್ತಿಯಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದು ಅಗತ್ಯ ಎಂದರು.
ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಂದಾಪ್ರ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರವಹಿಸಬೇಕು. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಭಾಷೆಯ ಬಗ್ಗೆ ಅಭಿಮಾನ ಮೂಡುತ್ತದೆ ಎಂದರು.ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ಪ್ರೊ. ನಾಗಪ್ಪ ಗೌಡ, ಜಯರತ್ನ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿದರು.ಅರುಣ್ ಕುಮಾರ್ ಹೆಗ್ಡೆ, ಸಬ್ಲಾಡಿ ಮಂಜಯ್ಯ ಶೆಟ್ಟಿ, ವಿಕಾಸ್ ಹೆಗ್ಡೆ, ಜಗನ್ನಾಥ್ ಶೆಟ್ಟಿ ಚಿಟ್ಟೆಬೈಲ್, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ರಾಜೇಶ್ ಕೆ.ಸಿ, ಉದಯ ಶೆಟ್ಟಿ ಪಡುಕರೆ, ಜುಡಿತ್ ಮೆಂಡೊನ್ಸಾ, ರೇಖಾ ಬನ್ನಾಡಿ ಇದ್ದರು.ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿದರು. ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ವಂದಿಸಿದರು. ಬಾರ್ಕೂರು ಸುಜ್ಞಾನ ನ್ಯಾಶನಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ನಿರೂಪಿಸಿದರು.ಭಾಷೆ ಮೆದುಳಿನ ದೀಪ! : ಭಾಷೆ ಮೆದುಳಿನ ದೀಪ. ಅದು ಉರಿಯುತ್ತಲೇ ಇರಬೇಕು. ಆ ದೀಪವನ್ನು ನಾವು ಬೆಳಗಿಸಿಕೊಂಡರೆ ಮಾತ್ರ ನಮ್ಮ ಸಂಸ್ಕೃತಿ, ಅಸ್ತಿತ್ವ, ಗುರುತು ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಮನೆಯಲ್ಲಿ, ಸಮಾಜದಲ್ಲಿ ಹಾಗೂ ಎಲ್ಲೆಡೆ ಸಾಧ್ಯವಾದಷ್ಟು ಕುಂದಾಪ್ರ ಕನ್ನಡವನ್ನೇ ಮಾತನಾಡಬೇಕು. ಬೇರೆ ಊರುಗಳಿಗೆ ಹೋದಾಗ ಅಲ್ಲಿನ ಭಾಷೆಯ ಪ್ರಭಾವದಿಂದ ಕೆಲವು ಪದಗಳು ಬೆರೆತರೂ, ನಮ್ಮ ಭಾಷೆಯ ಮೂಲ ಸೊಗಡು, ಉಚ್ಚಾರಣೆ ಮತ್ತು ವೈಶಿಷ್ಟ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೆ. ಜಯಪ್ರಕಾಶ ಹೆಗ್ಡೆ ತಮ್ಮ ಉದ್ಘಾಟನಾ ಮಾತನ್ನು ಕುಂದಾಪ್ರ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು.