ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾಮೂಹಿಕ ಹೊಣೆಗಾರಿಕೆ ಮುಖ್ಯ: ನ್ಯಾಯಾಧೀಶ ಅಮೋಲ್‌ ಹಿರಿಕುಡೆ

KannadaprabhaNewsNetwork |  
Published : Jun 25, 2025, 11:47 PM IST
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಹಿರಿಕುಡೆ ಉದ್ಘಾಟಿಸಿದರು. | Kannada Prabha

ಸಾರಾಂಶ

. ಮಕ್ಕಳನ್ನು ಓದಿಸಿ ಬಾಲ್ಯವನ್ನು ಆನಂದಿಸುವ ಬದಲು ಹಣಕ್ಕಾಗಿ ದುಡಿಯುವಂತೆ ಮಾಡುವುದು ಅಪರಾಧ.

ಬ್ಯಾಡಗಿ: ಬಾಲಕಾರ್ಮಿಕರನ್ನು ದುಡಿಯುವಂತೆ ಪ್ರಚೋದಿಸಲು ಮೂಲ ಕಾರಣ ಬಡತನ. ನಿಶ್ಚಿತ ಆದಾಯವಿಲ್ಲದ ಕುಟುಂಬಗಳು ತಮ್ಮ ಮಕ್ಕಳನ್ನು ದುಡಿದು ಕೂಲಿ ತರುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ಹಕ್ಕು ಮತ್ತು ಬದುಕಿಗೆ ಹಾನಿ ಮಾಡುವ ಪ್ರಮುಖ ಸಮಸ್ಯೆ ಇದಾಗಿದ್ದು, ಸಾರ್ವಜನಿಕರು ಸಾಮೂಹಿಕ ಹೊಣೆಗಾರಿಕೆ ತೋರುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಹಿರಿಕುಡೆ ತಿಳಿಸಿದರು.

ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಪಟ್ಟಣದ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಜರುಗಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಮ್ಮ ಬಾಲ್ಯದ ದಿನಗಳಲ್ಲಿ ಆಟವಾಡುತ್ತಾ, ಓದುತ್ತಾ, ಆರೋಗ್ಯಕರವಾದ ಆಹಾರ ಸೇವಿಸಬೇಕು. ಆದರೆ ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಯೋಗಕ್ಷೇಮದ ಮೇಲೆ ದುಷ್ಪರಿಣಾಮ ಬೀರಲಿದ್ದು, ಶಿಕ್ಷಣ ಸೇರಿದಂತೆ ಇನ್ನಿತರ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ್ ವಗ್ಗನವರ ಮಾತನಾಡಿ, ಬಾಲಕಾರ್ಮಿಕ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಅಸ್ತಿತ್ವದಲ್ಲಿದ್ದು, ಅವರೆಲ್ಲರೂ ಶಿಕ್ಷಣ ಸೇರಿದಂತೆ ಇನ್ನಿತರ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳನ್ನು ಓದಿಸಿ ಬಾಲ್ಯವನ್ನು ಆನಂದಿಸುವ ಬದಲು ಹಣಕ್ಕಾಗಿ ದುಡಿಯುವಂತೆ ಮಾಡುವುದು ಅಪರಾಧ. ಆದರೆ ಇಂದಿಗೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದ್ದು. ಇದನ್ನೂ ಭ್ರಷ್ಟಾಚಾರದ ಭಾಗವೆಂದೇ ಪರಿಗಣಿಸಬೇಕಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ರಾಜು ಶಿಡೇನೂರ ಮಾತನಾಡಿ, ಚಿಕ್ಕಮಕ್ಕಳು ಹೊಲ, ಗಣಿ, ಕಾರ್ಖಾನೆ, ರೀಟೇಲ್ ಹೋಲ್‌ಸೇಲ್ ಶಾಪ್‌ಗಳು ಮತ್ತು ಇತರ ಸಂಸ್ಥೆಗಳಲ್ಲಿ ಅಗ್ಗದ ದರದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಕಣ್ಣಿಗೆ ಮಣ್ಣೆರಚುವ ಉದ್ಯೋಗದಾತರು ಮತ್ತು ಬಂಡವಾಳಶಾಹಿ ಜನರು ಇಂತಹ ಕೃತ್ಯಗಳಲ್ಲಿಯೂ ಭಾಗಿಯಾಗಿ ತಪ್ಪಿಸಿಕೊಳ್ಳುತ್ತಿರುವುದು ದುರಂತದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಎನ್. ದೇವೇಂದ್ರ, ಪ್ರಾಚಾರ್ಯ ಡಾ. ಮಾಲತೇಶ ಬಂಡೆಪ್ಪನವರ, ಉಪಪ್ರಾಚಾರ್ಯ ಎಲ್. ಜಯರಾಜ್, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಕಾರ್ಯದರ್ಶಿ ಎಚ್.ಜಿ. ಮುಳುಗುಂದ, ಸಹ ಕಾರ್ಯದರ್ಶಿ ಮಂಜುನಾಥ ಕುಮ್ಮೂರ, ಹಿರಿಯ ನ್ಯಾಯವಾದಿಗಳಾದ ಪ್ರಭು ಶೀಗಿಹಳ್ಳಿ, ಭಾರತಿ ಕುಲಕರ್ಣಿ, ಮಂಜುಳಾ ಜಿಗಳಿ, ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ