ದುಗ್ಗಳ ಸದಾನಂದ
ಕೊಡಗಿನ ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ಸಾಮೂಹಿಕ ಚಿಂತನೆ ಅಗತ್ಯ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ ಹೇಳಿದರು.ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ತಂಡಗಳಿಗೆ ಕೊಡಗಿನ ಕ್ರೀಡಾ ಪ್ರತಿಭೆಗಳು ಆಯ್ಕೆಯಾಗದೆ ಇರುವುದು ಕಂಡು ಬಂದಿದೆ. ಈ ಕುರಿತು ಸಾಮೂಹಿಕ ಚಿಂತನೆ ನಡೆಸಿ ಕ್ರೀಡಾಪಟುಗಳ ಬೆಳವಣಿಗೆಗೆ ಶಿಸ್ತುಬದ್ಧ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದರು.ಕೊಡವ ಸಂಸ್ಕೃತಿಯ ಒಂದು ಭಾಗ:
ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಹಾಕಿ ಕೊಡವ ಸಂಸ್ಕೃತಿಯ ಒಂದು ಭಾಗವಾಗಿದೆ. ಕೊಡವರು ಸಣ್ಣ ಸಂಖ್ಯೆಯಲ್ಲಿದ್ದರೂ ದೊಡ್ಡ ಸಂಖ್ಯೆಯ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಆದರೆ ಇಂದು ರಾಜ್ಯ ಮಟ್ಟದ ತಂಡಕ್ಕೂ ಕ್ರೀಡಾ ಪ್ರತಿಭೆಗಳು ಆಯ್ಕೆಯಾಗದೆ ಇರುವುದು ಕಂಡು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕೌಟುಂಬಿಕ ಹಾಕಿ ಉತ್ಸವ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ, ಗ್ರಾಮ ಗ್ರಾಮಗಳಲ್ಲಿ ಕ್ರೀಡಾಕೂಟಗಳು ನಡೆಯುತ್ತಿವೆ. ಕೊಡಗು ಇಂದು ಹಾಕಿ ಕ್ರೀಡೆಗೆ ಮಾತ್ರ ಸೀಮಿತವಾಗದೆ ಎಲ್ಲಾ ಕ್ರೀಡೆಗಳಲ್ಲೂ ಗುರುತಿಸಿಕೊಂಡಿದೆ ಮತ್ತು ಕ್ರೀಡಾ ಪ್ರತಿಭೆಗಳು ತೊಡಗಿಸಿಕೊಳ್ಳುತ್ತಿದ್ದಾರೆ. ಕ್ರೀಡೆಗಳ ಬೆಳವಣಿಗೆಗಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ. ಪ್ರಸ್ತುತ ವಿ.ಬಾಡಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ, ಇಲ್ಲಿ ಶೂಟಿಂಗ್ ರೇಂಜ್ ನ್ನು ಕೂಡ ಅಳವಡಿಸಲಾಗುತ್ತಿದೆ. ಕೊಡಗಿನ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕ್ರೀಡಾ ತಂಡಗಳಿಗೆ ಕ್ರೀಡಾಪಟುಗಳು ಆಯ್ಕೆಯಾಗುತ್ತಿಲ್ಲ. ಈ ಬಗ್ಗೆ ಎಲ್ಲಾ ಹಾಕಿ ಸಂಸ್ಥೆಗಳು ಸಾಮೂಹಿಕ ಚಿಂತನೆ ನಡೆಸುವ ಮೂಲಕ ಶಿಸ್ತುಬದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು.ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪುಡಿರ ಅರುಣ್ ಮಾಚಯ್ಯ ಮಾತನಾಡಿ, ಒಲಂಪಿಯನ್ ಗಳಿರುವ ಹಾಕಿ ಸಂಸ್ಥೆಯ ಎರಡು ಗ್ರೂಪ್ ಗಳನ್ನು ಒಂದು ಮಾಡುವ ಅಗತ್ಯವಿದೆ, ಭಿನ್ನಾಭಿಪ್ರಾಯವಿಲ್ಲದೆ ಸದಸ್ಯತ್ವ ಸಿಗಬೇಕು. ಒಂದು ಮಾಡುವ ಕೆಲಸ ಕೊಡಗಿನಿಂದಲೇ ಆರಂಭಗೊಳ್ಳಲಿ, ಶಾಸಕರು ಸಹಕರಿಸಲಿ. ಹಿರಿಯ ಆಟಗಾರರೊಂದಿಗೆ ಈ ಕುರಿತು ಈಗಾಗಲೇ ಚರ್ಚಿಸಿದ್ದೇನೆ ಎಂದರು.ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷನಾಗಿ 13 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ, ಇಷ್ಟು ಜಿಲ್ಲೆಗಳಲ್ಲಿ ಕ್ರೀಡಾ ಸಂಕೀರ್ಣವಿಲ್ಲದ ಏಕೈಕ ಜಿಲ್ಲೆ ಎಂದರೆ ಅದು ಕೊಡಗು ಎಂದು ಬೇಸರ ವ್ಯಕ್ತಪಡಿಸಿದರು.11 ಎಕರೆ ಪ್ರದೇಶದಲ್ಲಿ ಕ್ರೀಡಾ ಸಂಕೀರ್ಣ:ಇದೀಗ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ವಿ.ಬಾಡಗದಲ್ಲಿ 11 ಎಕರೆ ಪ್ರದೇಶದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು, 30 ಕೋಟಿ ರು. ಮಂಜೂರಾಗಿದೆ. ಶಾಸಕ ಡಾ.ಮಂತರ್ ಗೌಡ ಅವರ ಪ್ರಯತ್ನದಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟರ್ಫ್ ಅಳವಡಿಕೆಗೆ 8 ಕೋಟಿ ರು.. ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಕ್ರೀಡಾಂಗಣಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಮಾತನಾಡಿ ಪಾಂಡಂಡ ಕುಟ್ಟಪ್ಪ ಅವರು ಆರಂಭಿಸಿದ ಕೊಡವ ಕೌಟುಂಬಿಕ ಹಾಕಿ ಉತ್ಸವ ಇಂದು ಕೊಡವ ಜನಾಂಗ ಒಗ್ಗೂಡಲು ಸಹಕಾರಿಯಾಗಿದೆ ಎಂದರು.ಸಣ್ಣ ಜಿಲ್ಲೆಯಾದರೂ ದೇಶದ ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಕೀರ್ತಿ ಕೊಡಗಿಗೆ ಸಲ್ಲುತ್ತದೆ. ಮುಂದಿನ ಪೀಳಿಗೆ ಉತ್ತಮ ರೀತಿಯಲ್ಲಿ ಕ್ರೀಡಾ ತರಬೇತಿಯನ್ನು ಪಡೆದು ಜಿಲ್ಲೆಗೆ ಮತ್ತು ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಾಗಿ ಹೊರ ಹೊಮ್ಮಲಿ ಎಂದು ಕರೆ ನೀಡಿದರು.ಎ.ಎಸ್.ಪೊನ್ನಣ್ಣ ಅವರು ಶಾಸಕರಾಗಿ ಜಮ್ಮಾ ಸಮಸ್ಯೆಗೆ ಪರಿಹಾರ ಸೂಚಿಸಿದ್ದು, ಅವರು ಅಭಿನಂದನಾರ್ಹರು. ಪಕ್ಷ ಯಾವುದೇ ಇರಲಿ ಕೊಡಗಿನ ಅಭಿವೃದ್ಧಿ ಮುಖ್ಯ ಎಂದು ಸುಜಾ ಕುಶಾಲಪ್ಪ ಹೇಳಿದರು.ಎಸ್ಎಲ್ಎನ್ ಗ್ರೂಪ್ ನ ವ್ಯವಹಾರಿಕ ಮುಖ್ಯಸ್ಥ ವೆಂಕಟಾಚಲಂ ಸಾತಪ್ಪನ್ ಅವರು ಮಾತನಾಡಿ ಪುಟ್ಟ ಜಿಲ್ಲೆ ಕೊಡಗು ಸೇನೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಕೊಂಡಾಡಿದರು.ಕ್ರೀಡಾಸ್ಫೂರ್ತಿ ಇತರರಿಗೆ ಮಾದರಿ:
ಅಂತಿಮ ಪಂದ್ಯ : ಗೆದ್ದು ಬೀಗಿದ ಚೆಪ್ಪುಡಿರ, ಸೋಲೊಪ್ಪಿಕೊಂಡ ಕುಲ್ಲೇಟಿರ