ಉಡುಪಿ: ಉಡುಪಿಯ ಶ್ರೀ ವಾದಿರಾಜರು ಮತ್ತು ಕನಕದಾಸರು ಜನಸಾಮಾನ್ಯರ ಬದುಕಿಗೆ ಮಾರ್ಗದರ್ಶಿಗಳಾಗಿದ್ದಾರೆ, ವಾದಿರಾಜರು ಮತ್ತು ಕನಕದಾಸರು ಬದುಕಿನಲ್ಲಿ ಹಲವು ಬಾರಿ ಮುಖಾಮುಖಿಯಾಗುತ್ತಾರೆ. ಚಿಂತನೆಗಳಲ್ಲಿ ಒಂದಾಗುತ್ತಾರೆ. ಇವರಿಬ್ಬರ ಸಾಹಿತ್ಯ ಕೃತಿಗಳು ಕೇವಲ ಭಕ್ತಿಯ ಅನುಭೂತಿಯನ್ನು ಕೊಡುವಂತಹುದಲ್ಲ, ಬದುಕಿನಲ್ಲಿ ತಾಳ್ಮೆಯನ್ನು ತಂದುಕೊಳ್ಳುವಂತೆ ನಿರ್ದೇಶಿಸುತ್ತವೆ ಎಂದು ಹಿರಿಯ ವಿದ್ವಾಂಸ ಡಾ. ಬಿ ಎ. ವಿವೇಕ ರೈ ಹೇಳಿದರು.
ಶಾಸ್ತ್ರೀಯ ಸಂಗೀತ ಇವರಿಬ್ಬರ ರಚನೆಗಳನ್ನು ಜನರಿಗೆ ತಲುಪುವಂತೆ ಮಾಡಿದವು. ಶ್ರೀ ವಾದಿರಾಜರ ಮುಖ್ಯ ಕೊಡುಗೆ ಎಂದರೆ ಶ್ರೀ ಕೃಷ್ಣ ಪೂಜೆಯಲ್ಲಿ 2 ವರ್ಷಗಳ ಪರ್ಯಾಯದ ಚಿಂತನೆಯನ್ನು ಕೊಡಮಾಡಿದ್ದು, ಪ್ರಜಾಪ್ರಭುತ್ವದ ಬೀಜಾಂಕುರಕ್ಕೆ ನಾಂದಿಯಾಯಿತು. ಈ ಬಗೆಯ ಸುಧಾರಣೆ ಆ ಕಾಲದಲ್ಲಿ ಮಾಡಿದ್ದು ಬಹುವಿಶೇಷ ಸಂಗತಿ ಎಂದು ಅವರು ವಿಶ್ಲೇಷಿಸಿದರು.
ಕನಕದಾಸರು ಕೂಡ ಆಧ್ಯಾತ್ಮಿಕಕ್ಕೆ ವೈಚಾರಿಕತೆಯ ಲೇಪನ ಮಾಡಿ ಭಕ್ತಿಯಲ್ಲಿ ಚಿಂತನೆಯ ಹೊಳಹುಗಳನ್ನು ಕಂಡುಕೊಂಡವರು. ಅಲ್ಲಮಪ್ರಭು ಮತ್ತು ಕನಕದಾಸರ ಚಿಂತನೆಗಳಲ್ಲಿ ಸಮಾನಾಂಶಗಳನ್ನು ನಾವು ಕಾಣಬಹುದು. ದಟ್ಟ ವೈಚಾರಿಕತೆಯ ಚೈತನ್ಯ ಕನಕರ ಭಕ್ತಿಮಾರ್ಗದಲ್ಲಿ ಅಡಕವಾಗಿದೆ ಎಂಬುದಾಗಿ ಹೇಳಿದರು.ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ರಮೇಶ್ ಟಿ.ಎಸ್. ಅವರು ವಾದಿರಾಜ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ಉಮಾಶಂಕರಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಅರುಣ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿಭಾ ಎಸ್. ನಾಯಕ್ ಮಂಗಳೂರು ಬಳಗದವರಿಂದ ಹಿಂದೂಸ್ಥಾನಿ ಸಂಗೀತ ಕಛೇರಿ ನಡೆಯಿತು.