- ಕಡತಗಳ ವಿಲೇವಾರಿ, ಅಧಿಕಾರಿಗಳನ್ನು ಎಚ್ಚರಿಸಲು ಅನುಕೂಲ - ಪ್ರತಿ ತಿಂಗಳು ಎರಡು ಬಾರಿ ನಡೆಸುವಂತೆ ಸಲಹೆ ಕನ್ನಡಪ್ರಭ ವಾರ್ತೆ ಮಂಡ್ಯ ಜನತಾ ದರ್ಶನದಂತಹ ಕಾರ್ಯಕ್ರಮಗಳು ತಿಂಗಳಲ್ಲಿ ಎರಡು ಬಾರಿಯಾದರೂ ನಡೆಯಬೇಕು. ಆಗಲಾದರೂ ಅಧಿಕಾರಿಗಳು ಜಾಗೃತರಾಗುವರು. ಕಡತಗಳ ವಿಲೇವಾರಿ, ಸಾರ್ವಜನಿಕ ಕೆಲಸಗಳು ಶೀಘ್ರಗತಿಯಲ್ಲಿ ನಡೆಯುತ್ತವೆ. ಕಚೇರಿಗೆ ವೃಥಾ ಅಲೆಯುವುದೂ ತಪ್ಪುತ್ತದೆ. ಲಂಚಕ್ಕೂ ಬ್ರೇಕ್ ಹಾಕಬಹುದು. ಇವು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ನಡೆಸಿದ ಜನತಾದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ಜನರಿಂದ ಕೇಳಿಬಂದ ಮಾತುಗಳು. ಜನತಾದರ್ಶನದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದರು. ಪರಿಹಾರದ ಮಾರ್ಗ ಸೂಚಿಸಿದರು. ಸ್ಥಳದಲ್ಲೇ ಇದ್ದ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಕಂದಾಯಾಧಿಕಾರಿ, ವಿಎ ಸೇರಿದಂತೆ ಕೇಸ್ ವರ್ಕರ್‌ಗಳಿಗೆ ಕಡತಗಳನ್ನು ಬಾಕಿ ಉಳಿಸದೆ ಶೀಘ್ರಗತಿಯಲ್ಲಿ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು. ಕಂದಾಯ ಇಲಾಖೆ ಸಮಸ್ಯೆಗಳೇ ಹೆಚ್ಚು: ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮೇಲುಗೈ ಸಾಧಿಸಿದ್ದವು. ಪೌತಿ ಖಾತೆ, ಆರ್‌ಟಿಸಿ ಬದಲಾವಣೆ, ಜಮೀನುಗಳ ದುರಸ್ತು, ತತ್ಕಾಲ್ ಪೋಡು ಮಾಡಿಕೊಡುವುದು, ಖಾತೆ ಬದಲಾವಣೆ, ಆರ್‌ಟಿಸಿ ಮತ್ತು ಆಕಾರ್ ಬಂದ್‌ಗೆ ತಾಳೆಯಾಗದಿರುವುದು, ಗೋಮಾಳ ಒತ್ತುವರಿ ತೆರವು, ಜಮೀನುಗಳ ಸ್ಕೆಚ್, ಆರ್‌ಟಿಸಿಯಲ್ಲಿರುವುದಕ್ಕಿಂತ ಹೆಚ್ಚುವರಿ ಜಮೀನು ಸೇರ್ಪಡೆ ಸೇರಿದಂತೆ ಕಂದಾಯ ಇಲಾಖೆಗೆ ಸೇರಿದ ಹಲವಾರು ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಜನರು ಆಗಮಿಸಿದ್ದರು. ಮಳೆ ಹಾನಿ ಪರಿಹಾರ ಬಿಡುಗಡೆಯಾಗಿಲ್ಲ: ಮಂಡ್ಯ ತಾಲೂಕಿನ ೨೦೦ ಜನರಿಗೆ ಕಳೆದ ವರ್ಷದ ಮಳೆಹಾನಿ ಪರಿಹಾರ ಇದುವರೆಗೂ ಬಿಡುಗಡೆಯಾಗದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾಗರ್ ಎಂಬುವರು ದೂರನ್ನು ಹೊತ್ತು ತಂದಿದ್ದರು. ಭಾರೀ ಮಳೆಯಿಂದ ಹಾನಿಗೊಳಗಾದ ಫಲಾನುಭವಿಗಳಿಗೆ ಒಂದು ಗುಂಟೆಗೆ ೨೫೦ ರು.ನಂತೆ ಪರಿಹಾರ ಕೊಡಬೇಕಿತ್ತು. ಫಲಾನುಭವಿಗಳಿಗೆ ಇದುವರೆಗೂ ಪರಿಹಾರ ಹಣ ತಲುಪಿಲ್ಲ. ಪರಿಹಾರ ತಲುಪದಿರುವುದಕ್ಕೆ ಕಾರಣವನ್ನೇ ಯಾರೂ ಹೇಳುತ್ತಿಲ್ಲ. ಯಾವ ದಾಖಲೆ ಬೇಕೆಂದೂ ಸಹ ಕೇಳುತ್ತಿಲ್ಲ. ಮಳೆಹಾನಿ ಪರಿಹಾರವನ್ನು ೯೦ ದಿನಗಳೊಳಗೆ ನೀಡಬೇಕೆಂಬ ನಿಯಮವಿದೆ. ಆದರೂ ಅಧಿಕಾರಿಗಳು ಲೆಕ್ಕಿಸುತ್ತಿಲ್ಲ ಎಂದು ದೂರಿದರು. ಏಳು ವರ್ಷದಿಂದ ಪರಿಹಾರ ಸಿಕ್ಕಿಲ್ಲ: ನಾನು ೨೦೧೬ರಲ್ಲಿ ಕೊಟ್ಟ ಅರ್ಜಿ ಇಲ್ಲಿಯವರೆಗೂ ವಿಲೇವಾರಿ ಮಾಡಿಲ್ಲ. ಆರ್‌ಟಿಸಿ ಇಂಡೀಕರಣ, ಆರ್‌ಟಿಸಿಯಿಂದ ಕೈಬಿಟ್ಟುಹೋದ ಜಮೀನನ್ನು ಸೇರಿಸಿಲ್ಲ, ತತ್ಕಾಲ್ ಪೋಡು ಮಾಡಿಕೊಟ್ಟಿಲ್ಲ. ಈಗ ಸಮಸ್ಯೆ ಹೇಳಲು ಹೋದರೆ ಅರ್ಜಿ ಕೊಡಿ ಎನ್ನುತ್ತಾರೆ. ಅರ್ಜಿ ಕೊಟ್ಟರೆ ದಾಖಲೆ ಕೊಡಿ ಎನ್ನುತ್ತಾರೆ. ಕಂದಾಯ ಇಲಾಖೆಯಲ್ಲೇ ಎಲ್ಲಾ ದಾಖಲೆಗಳಿರುತ್ತವೆ. ಇನ್ನೇನು ದಾಖಲೆಗಳು ಬೇಕು. ಜನತಾದರ್ಶನ ಎನ್ನುವುದು ಜನರ ಕಣ್ಣೊರೆಸುವ ಕಾರ್ಯಕ್ರಮ ಆಗುವುದು ಬೇಡ ಎಂದು ಸಂಪಹಳ್ಳಿ ಶಿವಶಂಕರ್ ಹೇಳಿದರು. ತಪ್ಪಿತಸ್ಥರ ವಿರುದ್ಧ ಸ್ಥಳದಲ್ಲೇ ಕ್ರಮವಾಗಲಿ: ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸುವ ವ್ಯವಸ್ಥೆ ಜಾರಿಯಾಗುವುದು ಉತ್ತಮ. ಅದನ್ನೂ ಜೇಷ್ಠತೆಯ ಆಧಾರದ ಮೇಲೆ ವಿಲೇವಾರಿ ಮಾಡುವಂತಾಗಬೇಕು. ಮೋಜಿಣಿ ಇಲಾಖೆಯಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ. ಕಂದಾಯ ಇಲಾಖೆಯಲ್ಲೂ ಈ ವ್ಯವಸ್ಥೆ ಜಾರಿಯಾದರೆ. ಈ ಅರ್ಜಿ ಯಾವಾಗ ಸಲ್ಲಿಕೆಯಾಯಿತು, ವಿಳಂಬಕ್ಕೆ ಏನು ಕಾರಣ, ಅದಕ್ಕೆ ಯಾರು ಜವಾಬ್ದಾರರು ಎನ್ನುವುದನ್ನು ತಿಳಿಯಬಹುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತ್ವರಿತ ಕ್ರಮ ಜರುಗಿಸಿದಾಗ ಮಾತ್ರವಷ್ಟೇ ಕಂದಾಯ ಇಲಾಖೆಯಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಶಂಭೂನಹಳ್ಳಿ ಕೃಷ್ಣ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಎಂ.ಬಾಬು, ಉಪ ಕಾರ್ಯದರ್ಶಿ (ಅಭಿವೃದ್ಧಿ) ಆನಂದ್‌ಕುಮಾರ್, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ನಗರಸಭೆ ಪೌರಯುಕ್ತ ಮಂಜುನಾಥ್ ಭಾಗವಹಿಸಿದ್ದರು. ಬಾಕ್ಸ್.... ಜನರಿಂದ ಹರಿದುಬಂದ ಅರ್ಜಿಗಳ ಮಹಾಪೂರ ಮಂಡ್ಯ: ವರ್ಷಗಳಿಂದ ವಿಲೇವಾರಿಯಾಗದ ಕಡತಗಳು, ತಿದ್ದುಪಡಿಯಾಗದ ಆರ್‌ಟಿಸಿಗಳು, ಬಾಕಿ ಉಳಿದಿರುವ ತತ್ಕಾಲ್ ಪೋಡುಗಳು, ಇಂಡೀಕರಣವಾಗದ ಆರ್‌ಟಿಸಿಗಳು, ತೆರವಾಗದ ಗೋಮಾಳ ಒತ್ತುವರಿ, ಖಾತೆಯಾಗದ ಜಮೀನುಗಳು ಹೀಗೆ ನೂರಾರು ಸಮಸ್ಯೆಗಳನ್ನು ಹೊತ್ತ ಅರ್ಜಿಗಳ ಮಹಾ ಪೂರವೇ ಜಿಲ್ಲಾಧಿಕಾರಿಗಳು ನಡೆಸಿದ ಜನತಾದರ್ಶನಕ್ಕೆ ಹರಿದುಬಂದಿತ್ತು. ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮಕ್ಕೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅರ್ಜಿಗಳ ರೂಪದಲ್ಲಿ ಬರೆದು ಕೊಟ್ಟು ಅಳಲು ತೋಡಿಕೊಂಡರು. ಕೆಲವು ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಅವರು ಸ್ಥಳದಲ್ಲೇ ಪರಿಹಾರ ಸೂಚಿಸಿ ಸಮಸ್ಯೆ ಹೇಳಿಕೊಂಡವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು. ಸ್ಥಳದಲ್ಲಿದ್ದ ಕಂದಾಯಾಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳಿಂದ ಅರ್ಜಿಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡರು, ತದನಂತರ ಯಾವುದೇ ಅರ್ಜಿಯೂ ಬಾಕಿ ಉಳಿಯಬಾರದು ಎಂದು ವೇದಿಕೆಯ ಪಕ್ಕದಲ್ಲಿ ಕಂಪ್ಯೂಟರ್‌ಗಳನ್ನು ಇಟ್ಟುಕೊಂಡು ಆಯಾ ಸಿಬ್ಬಂದಿ ಮೂಲಕ ಅರ್ಜಿಯ ನಂಬರ್‌ಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು, ಅಗತ್ಯ ದಾಖಲೆಗಳು ಸಿಗದಿದ್ದರೆ ತದನಂತರ ಬಗೆಹರಿಸಿಕೊಡಲು ದಿನಾಂಕವನ್ನು ನಿಗದಿ ಮಾಡಿ ಕಳುಹಿಸಿಕೊಡಲಾಗುತ್ತಿತ್ತು. ಕೋಟ್... ನಮ್ಮ ಜಮೀನಿನ ಆರ್‌ಟಿಸಿಯಲ್ಲಿ ೧೦ ಗುಂಟೆ ಇದ್ದು, ಈಗ ಕೇವಲ ೪ ಗುಂಟೆ ಮಾತ್ರ ಬರುತ್ತಿದೆ. ಈ ಬಗ್ಗೆ ಅರ್ಜಿಕೊಟ್ಟು ಮೂರು ವರ್ಷವೇ ಕಳೆದಿತ್ತು. ಸಮಸ್ಯೆ ಬಗೆಹರಿದಿರಲಿಲ್ಲ. ಜನತಾ ದರ್ಶನದ ಮೂಲಕ ಆರ್‌ಐ ಮತ್ತು ವಿಎಗೆ ಸೂಚನೆ ನೀಡುವ ಮೂಲಕ ಮೂರು ದಿನದಲ್ಲಿಯೇ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. -ಸರಸ್ವತಮ್ಮ, ಉಪ್ಪರಕನಹಳ್ಳಿ ----------- ಬೇಲೂರು ಗ್ರಾಮದ ಸ.ನ.೧೮೩/೨೧ರ ಜಮೀನು ಖಾತೆಗೆ ಅರ್ಜಿ ಕೊಟ್ಟು ಎರಡು ತಿಂಗಳು ಆಗಿತ್ತು, ಅದನ್ನು ಖಾತೆ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜನತಾ ದರ್ಶನದಲ್ಲಿ ನನ್ನ ಕೆಲಸವಾಗಿರುವುದು ಸಂತೋಷ ತರಿಸಿದೆ. ಇಂತಹ ಜನತಾ ದರ್ಶನ ಕಾರ್ಯಕ್ರಮ ಹೋಬಳಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಯಬೇಕು. -ಬಿ.ಬೊಮ್ಮೇಗೌಡ, ಬಿ.ಯರಹಳ್ಳಿ ------------ ಜಿಲ್ಲೆಯಲ್ಲಿ ಸಾರ್ವಜನಿಕ ಅಹವಾಲುಗಳನ್ನು ತಾಲೂಕು ಮಟ್ಟದಲ್ಲಿಯೇ ಪರಿಹರಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಪ್ರತಿ ವಾರದಲ್ಲಿ ಒಂದೊಂದು ದಿನ ಒಂದು ತಾಲೂಕಿಗೆ ಭೇಟಿ ನೀಡಿ. ಅಲ್ಲಿನ ಸಾರ್ವಜನಿಕರ ಸಮಸ್ಯೆ ಆಲಿಸಲಾಗುವುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆ ನೀಡಲಾಗಿದೆ. ಗ್ರಾಮ ಮಟ್ಟದಲ್ಲಿಯೇ ಪೌತಿ ಖಾತೆ ಆಂದೋಲನ ನಡೆಯುವುದರಿಂದ ಪ್ರಕರಣಗಳು ಶೀಘ್ರ ವಿಲೇವಾರಿಯಾಗಲಿವೆ. - ಡಾ.ಕುಮಾರ, ಜಿಲ್ಲಾಧಿಕಾರಿ