ಕಂಪ್ಲಿ: ಪಟ್ಟಣದ ಡಾ.ಪುನೀತ್ ರಾಜಕುಮಾರ ರಸ್ತೆಯಲ್ಲಿ ಕಂಪ್ಲಿ ಉತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭವ್ಯ ರಂಗೋಲಿ ಸ್ಪರ್ಧೆ ಜನರ ಗಮನ ಸೆಳೆಯಿತು.
ಸುಮಾರು 137 ಮಹಿಳೆಯರು ಉತ್ಸಾಹಭರಿತರಾಗಿ ಭಾಗವಹಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದರು. ಬೆಳಗ್ಗಿನಿಂದಲೇ ನೆಲದ ಮೇಲೆ ಬಣ್ಣದ ಪುಡಿಗಳನ್ನು ಹಾಸಿ ಮನಮೋಹಕ ವಿನ್ಯಾಸಗಳನ್ನು ರೂಪಿಸಿದ ದೃಶ್ಯ ನೋಡುಗರನ್ನು ಆಕರ್ಷಿಸಿತು. ವಿವಿಧ ಬಗೆಯ ಪುಷ್ಪಾಲಂಕಾರಗಳು, ಆಕರ್ಷಕ ಹೂವಿನ ಅಲಂಕಾರ ವಿನ್ಯಾಸಗಳು, ಶಿವ, ದುರ್ಗೆ, ಗಣೇಶ ಸೇರಿದಂತೆ ವಿವಿಧ ದೇವತೆಗಳ ಭಾವಚಿತ್ರಗಳು ರಂಗೋಲಿಯಲ್ಲಿ ಜೀವಂತವಾಗಿ ಮೂಡಿಬಂದವು.
ಇದರ ಜೊತೆಗೆ ಸ್ಥಳೀಯ ಇತಿಹಾಸದ ಪ್ರತೀಕವಾದ ಗಂಡುಗಲಿ ಕುಮಾರರಾಮ, ಅವರ ಕೋಟೆಯ ಚಿತ್ರಣ, ಶಾಸಕ ಜೆ.ಎನ್. ಗಣೇಶ್ ಅವರ ಚಿತ್ರ ರೂಪಗಳು ವಿಶೇಷ ಗಮನ ಸೆಳೆದವು. ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಬೇಟಿ ಬಚಾವೋ, ಬೇಟಿ ಪಡಾವೋ’, ‘ಮಾದಕ ವಸ್ತು ಮುಕ್ತ ಕರ್ನಾಟಕ’ ಮೊದಲಾದ ಸಂದೇಶಗಳನ್ನು ಒಳಗೊಂಡ ರಂಗೋಲಿಗಳು ಜನರಲ್ಲಿ ಚಿಂತನೆಗೆ ಪ್ರೇರಣೆ ನೀಡಿದವು.ಬಣ್ಣ ಬಣ್ಣದ ವಿನ್ಯಾಸಗಳಿಂದ ರಸ್ತೆ ಒಂದು ಬೃಹತ್ ಕಲಾ ಗ್ಯಾಲರಿಯಂತಾಗಿ ಮಾರ್ಪಟ್ಟಿತ್ತು. ಸ್ಥಳೀಯರು, ಮಕ್ಕಳು ಹಾಗೂ ಉತ್ಸವಕ್ಕೆ ಆಗಮಿಸಿದ್ದ ಅತಿಥಿಗಳು ರಂಗೋಲಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರ ಕಲಾ ನೈಪುಣ್ಯ, ಸಹನೆ ಹಾಗೂ ಸೃಜನಶೀಲತೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು.
ಮೆಹೆಂದಿ ಸ್ಪರ್ಧೆ:
ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಮೆಹೆಂದಿ ವಿನ್ಯಾಸಗಳು ಸ್ಪರ್ಧೆಗೆ ವಿಶೇಷ ಕಳೆ ತಂದವು. ಹೂವಿನ ಅಲಂಕಾರ, ಅರಬಿಕ್ ಶೈಲಿ, ಪರಂಪರೆಯ ನಕ್ಷತ್ರ ವಿನ್ಯಾಸಗಳು ಮತ್ತು ಸೂಕ್ಷ್ಮ ಕಲೆಗಳಿಂದ ಅಲಂಕರಿಸಿದ ಕೈಗಳು ನೋಡುಗರ ಮನಸೆಳೆದವು. ಸ್ಪರ್ಧಾರ್ಥಿಗಳ ಕಲ್ಪನೆ, ನಿಖರತೆ ಹಾಗೂ ಸಹನೆಯ ಪ್ರತಿಬಿಂಬವಾಗಿ ಪ್ರತಿಯೊಂದು ವಿನ್ಯಾಸವೂ ಮಿನುಗಿತು.
ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ, ಹಾಲಿ ಶಾಸಕ ಬಿ.ನಾಗೇಂದ್ರ, ಶಾಸಕ ಭರತ್ ರೆಡ್ಡಿ ಭಾಗವಹಿಸಿದ್ದಾರೆ