ಕನ್ನಡಪ್ರಭ ವಾರ್ತೆ ಶಿರಾ ದೇಶದಲ್ಲಿನ ಎಲ್ಲ ಜಾತಿಗಳು ನಿರ್ನಾಮ ಆಗಬೇಕು. ಜಾತಿ ಎಂಬುದು ಒಂದು ಭ್ರಮೆ. ಆ ಭ್ರಮೆಯನ್ನು ಬಿಟ್ಟು ನಾವುಗಳು ಹೊರಬರಬೇಕಿದೆ ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.
ಅವರು ನಗರದ ಡಾ.ಬಾಬು ಜಗಜೀವನ ರಾಂ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಡಾ.ಬಾಬು ಜಗಜೀವನ ರಾಂ ಅವರ ೧೧೮ನೇ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರು ದೇಶದ ಮಹಾನ್ ಚೇತನಗಳು. ಎಲ್ಲರೂ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡಿದಾಗ ಮಾತ್ರ ನಾವು ಅವರಿಗೆ ಕೊಡುವ ಬಹುದೊಡ್ಡ ಗೌರವ. ನಾವೆಲ್ಲರೂ ಅವರನ್ನು ಅರ್ಥ ಮಾಡಿಕೊಂಡು, ಅವರ ಆದರ್ಶಗಳನ್ನು ಪಾಲಿಸಬೇಕು. ಜಾತಿ ಸಂಕೋಲೆಗಳನ್ನು ತೊಡೆದು ಹಾಕಿ ಅಂಬೇಡ್ಕರ್ ಹೇಳಿದ್ದ ಸಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ ಅಂಬೇಡ್ಕರ್ ಅವರು ಮಹಾನ್ ದರ್ಶನಿಕರು. ತುಳಿತಕ್ಕೊಳಗಾದ ಸಮುದಾಯ ಅಭಿವೃದ್ಧಿ ಹೊಂದಲು ಶಿಕ್ಷಣವೊಂದೇ ಅಸ್ತ್ರ ಎಂದು ಹೇಳಿದವರು. ಪ್ರಪಂಚದಲ್ಲಿ ೩೨ ಪದವಿ ಪಡೆದ ಏಕೈಕ ವ್ಯಕ್ತಿ ಅಂಬೇಡ್ಕರ್. ಅವರ ಮನೆಯ ಗ್ರಂಥಾಲಯದಲ್ಲಿ ೫೩ ಸಾವಿರ ಪುಸ್ತಕ ಇಟ್ಟುಕೊಂಡಿದ್ದವರು. ನಾವೆಲ್ಲರೂ ಬಾಬಾ ಸಾಹೇಬರ ಆಶಯ ಈಡೇರಿಸುವ ಕೆಲಸ ಮಾಡಬೇಕು. ದಲಿತರು ಶಿಕ್ಷಣ ಮೂಲಕ ಸಮಾನತೆ ಪಡೆಯಬೇಕ ಎಂದರು.ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಮಾತನಾಡಿ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಅವಕಾಶ ಸಿಗಲು ಕಾರಣಕರ್ತರು. ಅಂಬೇಡ್ಕರ್ ಅವರ ಜಯಂತಿಯನ್ನು ಭಾರತದಲ್ಲಷ್ಟೆ ಅಲ್ಲ. ಬೇರೆ ದೇಶದಲ್ಲೂ ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಅಂತಹ ಮಹಾನ್ ಚೇತನ ಅಂಬೇಡ್ಕರ್ ಎಂದರು. ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಸುನಿಲ್ ಕುಮಾರ್ ಬಾಬು ಜಗಜೀವನ ರಾಮ್ ಹಾಗೂ ಅಂಬೇಡ್ಕರ್ ಅವರು ದೇಶದ ಮಹಾನ್ ಚೇತನಗಳು ದೇಶಕ್ಕೆ ಹಸಿರು ಕ್ರಾಂತಿ ಕೊಟ್ಟವರು ಜಗಜೀವನ ರಾಮ್ ದೇಶಕ್ಕೆ ಉಸಿರು ಕೊಟ್ಟವರು ಅಂಬೇಡ್ಕರ್. ಅಂಬೇಡ್ಕರ್ ಅವರು ಈ ದೇಶದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದ್ದರು. ಬಾಬು ಜಗಜೀವನ ರಾಂ ಅವರು ದೇಶದಲ್ಲಿ ಯಾರೂ ಆಹಾರದಿಂದ ವಂಚಿತರಾಗಬಾರದೆಂದು ಹಸಿರು ಕ್ರಾಂತಿ ಮಾಡಿದರು. ಅವರನ್ನು ನಾವು ಎಂದಿಗೂ ಸ್ಮರಿಸಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ನಗರದ ಮುಖ್ಯ ರಸ್ತೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬೂ ಜಗಜೀವನ ರಾಂ ಅವರ ಭಾವಚಿತ್ರಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಿರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ ಅರ್ ಮಂಜುನಾಥ್, ನಗರಸಥೆ ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಮಾಜಿ ಪುರಸಭಾ ಸದಸ್ಯ ಟಿ ಲೋಕೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಗುರುಮೂರ್ತಿ ಗೌಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೆ ಬಡಿಗೇರ, ಪೌರಾಯುಕ್ತ ರುದ್ರೇಶ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಆರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ನಾಗರಾಜು, ನಗರಸಭೆ ಸದಸ್ಯರಾದ ಬುರಾನ್ ಮೊಹಮದ್, ಆಶ್ರಯ ಸಮಿತಿ ಸದಸ್ಯೆ ಜಯಲಕ್ಷ್ಮೀ ಸೂಡಾ ಸದಸ್ಯ ಲಕ್ಕನಹಳ್ಳಿ ಶ್ರೀನಿವಾಸ್, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ವಲಯ ಅರಣ್ಯಾಧಿಕಾರಿ ನವನೀತ್, ಬಿಇಓ ಕೃಷ್ಣಪ್ಪ, ಮುಖಂಡರಾದ ಜೆ.ಎನ್.ರಾಜಸಿಂಹ, ಟೈರ್ ರಂಗನಾಥ್, ಮಾಗೋಡು ಯೋಗಾನಂದ್, ಮಣಿಕಂಠ, ಚಿಕ್ಕಣ್ಣ, ಹನುಮಂತರಾಜು, ಪಿ.ಬಿ. ನರಸಿಂಹಯ್ಯ, ರಂಗನಾಥ್ ಕೊಟ್ಟ, ಗಜಮಾರನಹಳ್ಳಿ ನಾಗರಾಜು, ನಿಲಯದ ಪಾಲಕರದ ಶ್ರೀಶೈಲ ಕೊಂಡಗುಳಿ, ಹರೀಶ್, ಸೇರಿದಂತೆ ಹಲವರು ಹಾಜರಿದ್ದರು.