ಅಯೋಧ್ಯೆಗೆ ಬಂದು ಪ್ರಾಯಶ್ಚಿತ್ತ ಮಾಡಿಕೊಳ್ಳಿ: ಕಾಂಗ್ರೆಸ್ ನಾಯಕರಿಗೆ ಸುನಿಲ್ ಕುಮಾರ್ ಸಲಹೆ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದು ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಕರಸೇವಕರ ಮಾರಣಹೋಮಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಸುನಿಲ್ ಕುಮಾರ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದು ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಕರಸೇವಕರ ಮಾರಣಹೋಮಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಸುನಿಲ್ ಕುಮಾರ್ ಸಲಹೆ ನೀಡಿದ್ದಾರೆ.

ಅವರು ಶನಿವಾರ ಉಡುಪಿಯಲ್ಲಿ ಮಾತನಾಡಿ, ಆರಂಭದಿಂದಲೂ ರಾಮಮಂದಿರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಕರಸೇವಕರ ಮೇಲೆ ಗುಂಡಿನ ದಾಳಿ ಮಾಡಿದ ಕಾಂಗ್ರೆಸ್ ನಿಲುವು ಏನು ಎಂಬುದು ಜನಮಾನಸಕ್ಕೆ ಗೊತ್ತಿದೆ ಎಂದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವುದು ರಾಮಮಂದಿರ ಅಲ್ಲ, ಅದು ರಾಷ್ಟ್ರಮಂದಿರ, ಕಾಲಘಟ್ಟ ಬದಲಾಗಿದೆ. ರಾಮ ಮಂದಿರ ಉದ್ಘಾಟನೆಗೆ ಎಲ್ಲ ಪಕ್ಷಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಖರ್ಗೆ, ಸೋನಿಯಾ ಗಾಂಧಿ ಸಹಿತ ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಗೆ ಬರುವ ಮಾನಸಿಕತೆ ಮಾಡಿಕೊಂಡರೆ ಒಳ್ಳೆಯದು. ಚುನಾವಣೆ ಬಂದಾಗ ಹಿಂದೂ ಅನ್ನೋದರ ಬದಲು ನೈಜ ಹಿಂದುತ್ವ ಪ್ರದರ್ಶಿಸಿ, ಚುನಾವಣಾ ಹಿಂದುಗಳಾಗಬೇಡಿ ಎಂದರು.

ಅಯೋಧ್ಯೆಗೆ ಕಾಂಗ್ರೆಸ್ ನಾಯಕರು ಬರದಿದ್ದರೇ ದೇಶಕ್ಕೆ ಅವಮಾನ: ಶೋಭಾ

ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆಯ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು. ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದಲ್ಲಿ ಅದು ದೇಶಕ್ಕೆ ಮತ್ತು ನಮ್ಮ ಶ್ರದ್ಧೆಗೆ ಮಾಡಿದ ಅವಮಾನವಾಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 70 ವರ್ಷಗಳಿಂದಲೂ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎಂದು ರಾಮಮಂದಿರ ನಿರ್ಮಾಣದ ವಿರುದ್ಧ ಹೋರಾಟ ಮಾಡಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ರಾಮಮಂದಿರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿದ್ದರು. ಆದರೆ 2014ರಲ್ಲಿ ನ್ಯಾಯಾಲಯದಲ್ಲಿ ರಾಮಮಂದಿರ ಪರ ಹೋರಾಟಕ್ಕೆ ಜಯ ಆಗಿದೆ. ಈಗ ಭವ್ಯವಾದ ಮಂದಿರ ನಿರ್ಮಾಣವಾಗಿದೆ. ಬಿಜೆಪಿ, ವಿಶ್ವಹಿಂದು ಪರಿಷತ್ ಅಥವಾ ನ್ಯಾಸ ಸಮಿತಿ ಯಾವುದೇ ರಾಜಕೀಯವನ್ನು ಮನಸ್ಸಲ್ಲಿ ಇಟ್ಟುಕೊಂಡಿಲ್ಲ. ರಾಮಮಂದಿರದ ಪ್ರತಿಷ್ಠಾಪನೆಯಲ್ಲಿ ದೇಶದ ಎಲ್ಲರೂ ಭಾಗವಹಿಸಬೇಕು. ಎಲ್ಲರೂ ರಾಮನ ದರ್ಶನ ಮಾಡಬೇಕು, ಇದು ನಮ್ಮ ಅಸ್ಮಿತೆಯ ಪ್ರಶ್ನೆ. ಆದ್ದರಿಂದ ಕಾಂಗ್ರೆಸ್ ನಾಯಕರು ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.ಹೋರಾಟಕ್ಕೆ ಸರ್ಕಾರ ಹೆದರುತ್ತಿದೆರಾಜ್ಯ ಸರ್ಕಾರದ ವಿರುದ್ಧ ಜನರು ಹೋರಾಟದ ಮೂಡ್‌ನಲ್ಲಿದ್ದಾರೆ. ಅವರನ್ನು ಸಿದ್ದರಾಮಯ್ಯ ಸರ್ಕಾರ ಬಾಯಿ ಮುಚ್ಚಿಸುವ ದಮನ ನೀತಿ ಅನುಸರಿಸುತ್ತಿದೆ. ತಪ್ಪು, ಸರಿಗಳು ಎಲ್ಲ ಸಂದರ್ಭಗಳಲ್ಲೂ ನಡೆಯುತ್ತದೆ. ಹೋರಾಟಗಾರರನ್ನು ಬಂಧಿಸಿ 15 ದಿನ ಜೈಲಿನಲ್ಲಿಡುವುದು ಸರಿಯಲ್ಲ. ಸರ್ಕಾರ ಹೋರಾಟಗಾರಿಗೆ ಯಾಕೆ ಹೆದರುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದರು.

Share this article