ಕನ್ನಡಪ್ರಭ ವಾರ್ತೆ ಶಹಾಪುರ
ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಕೆಬಿಜೆಎನ್ಎಲ್ ಆಡಳಿತ ಕಚೇರಿ ಮುಂದೆ ಕಳೆದ 15 ದಿನಗಳಿಂದ ಅಹೋರಾತ್ರಿ ನಡೆಯುತ್ತಿರುವ ಧರಣಿ ಶನಿವಾರವೂ ಮುಂದುವರಿದಿದೆ. ನೀರು ಬರುವವರಿಗೆ ಧರಣಿ ಹಿಂಪಡೆಯುವುದಿಲ್ಲ ಎಂದು ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.ಈ ವೇಳೆ ಮಾತನಾಡಿದ ರೈತ ಮುಖಂಡ ಮಲ್ಕಣ್ಣ ಚಿಂತಿ ಅವರು, ರೈತರು ಸಾಲ ಮಾಡಿ ಬೆಳೆಗೆ ಖರ್ಚು ಮಾಡಿ ಮೆಣಸಿನಕಾಯಿ ಬೆಳೆ ಕೈ ಸೇರುವ ಹೊತ್ತಿಗೆ ನೀರಿಲ್ಲದೆ ಬೆಳೆಗಳು ಹಾಳಾಗುತ್ತಿವೆ. ಜಮೀನಿಗೆ ನೀರು ಬಿಡಿ ಇಲ್ಲ, ಎಕರೆಗೆ 2 ಲಕ್ಷ ರು. ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ, ಸಂಘದ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ, ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶ್ ಗೌಡ ಸುಬೇದಾರ್, ಗುರಣ್ಣ ದೇಸಾಯಿ ಹಾಗೂ ಸರ್ವಣ್ಣ ಸಾಹುಕಾರ ರಸ್ತಾಪೂರ ಅವರ ನಿಯೋಗವು ನಾರಾಯಣಪುರ ಹಾಗೂ ಆಲಮಟ್ಟಿ ಡ್ಯಾಂನಲ್ಲಿ ನೀರಿನ ಲಭ್ಯತೆ ಬಗ್ಗೆ ಖುದ್ದಾಗಿ ಶನಿವಾರ ಉಭಯ ಡ್ಯಾಂಗೆ ಭೇಟಿ ನೀಡಿ ಮಾಹಿತಿ ಪಡೆದ ನಂತರ ಮುಂದಿನ ಹೋರಾಟ ರೂಪಿಸಲಾಗುವುದೆಂದು ನೀಯೋಗದ ಮುಖಂಡರು ತಿಳಿಸಿದ್ದಾರೆ.ಅಧಿಕಾರಿಗಳು ಮತ್ತು ರಾಜಕಾರಣಿಗಳು ನಾರಾಯಣಪುರ ಮತ್ತು ಆಲಮಟ್ಟಿ ಡ್ಯಾಂನಲ್ಲಿನ ನೀರಿನ ಲಭ್ಯತೆ ಬಗ್ಗೆ ಸ್ಪಷ್ಟತೆ ನೀಡುತ್ತಿಲ್ಲ. ನಾವೇ ರೈತರು ಖುದ್ದಾಗಿ ನಾರಾಯಣಪುರ ಮತ್ತು ಆಲಮಟ್ಟಿ ಡ್ಯಾಂಗೆ ಭೇಟಿ ನೀಡಿ ನೀರಿನ ಲಭ್ಯತೆ ನೋಡಿಕೊಂಡು, ಜ.1ರಂದು ಸಿಎಂ ಮನೆಗೆ ಮುತ್ತಿಗೆ ಹಾಕುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ.ಮಲ್ಲಿಕಾರ್ಜುನ್ ಸತ್ಯಂಪೇಟೆ, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರು.