ಧಮ್ ಇದ್ರೆ ಗ್ಯಾರಂಟಿ ಬಗ್ಗೆ ಚರ್ಚೆಗೆ ಬನ್ನಿ: ಬಿಜೆಪಿ - ಜೆಡಿಎಸ್‌ಗೆ ಸಿಎಂ ಸವಾಲ್‌

KannadaprabhaNewsNetwork |  
Published : Mar 04, 2024, 01:22 AM ISTUpdated : Mar 04, 2024, 12:48 PM IST
ಸಿದ್ದು

ಸಾರಾಂಶ

ನಿಮಗೆ ತಾಕತ್ತು, ಧಮ್ ಇದ್ರೆ ಒಂದೇ ವೇದಿಕೆಗೆ ಬನ್ನಿ, ನಾವು ಕೊಡ್ತಾ ಇರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್‌ಗೆ ಸವಾಲ್ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಿಮಗೆ ತಾಕತ್ತು, ಧಮ್ ಇದ್ರೆ ಒಂದೇ ವೇದಿಕೆಗೆ ಬನ್ನಿ, ನಾವು ಕೊಡ್ತಾ ಇರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್‌ಗೆ ಸವಾಲ್ ಹಾಕಿದ್ದಾರೆ. 

ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂಬಾಗಲಿನಿಂದ ಅಧಿಕಾರಕ್ಕೆ ಬಂದವರು, ಹಾಗಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿಯನ್ನು ಛೇಡಿಸಿದರು. 

ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಾವುಗಳು ವಿಫಲವಾಗಿದ್ದೇವೆಂದು ಸುಳ್ಳು ಹೇಳುವ ಬಿಜೆಪಿಗೆ ನಾಚಿಕೆಯಾಗಬೇಕು. ನಿಮಗೆ ಮಾನ ಮರ್ಯಾದೆ ಇಲ್ವಾ ಎಂದು ಪ್ರಶ್ನಿಸಿದ ಸಿಎಂ, ಸುಳ್ಳೇ ಬಿಜೆಪಿಯ ಮನೆ ದೇವರು ಎಂದು ಆಕ್ರೋಶ ವ್ಯಕ್ತಪಡಿಸಿದರು. 

2008 ಹಾಗೂ 2018 ರಲ್ಲಿ ರಾಜ್ಯದಲ್ಲಿ ಬಿಜೆಪಿ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಿ ಅಧಿಕಾರಕ್ಕೆ ಬಂದಿತು. 

ರಾಜ್ಯದಲ್ಲಿ ಮೊದಲ ಬಾರಿಗೆ ಆಪರೇಷನ್ ಕಮಲ ಜಾರಿಗೆ ತಂದಿದ್ದು ಬಿಜೆಪಿ ಎಂದು ಹೇಳಿದರು. ನಮ್ಮ ಪಕ್ಷ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿಯವರು ರಾಜಸ್ಥಾನದಲ್ಲಿ ಪ್ರಸ್ತಾಪ ಮಾಡಿ, ಇದು, ಸಾಧ್ಯವಿಲ್ಲ. 

ಅನುಷ್ಟಾನಕ್ಕೆ ಬಂದರೆ ರಾಜ್ಯ ದಿವಾಳಿಯಾಗಲಿದೆ ಎಂದಿದ್ದರು ಮಿಸ್ಟರ್ ಮೋದಿಜೀ, ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದೂ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದಿದ್ದೇವೆ ಎಂದರು. 

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಬಿಜೆಪಿ ನಿರಂತರವಾಗಿ ಅವಮಾನಿ ಸುತ್ತಿದೆ. ಒಂದು ಕಡೆ ಅವಮಾನಿಸುತ್ತಲೇ ಮತ್ತೊಂದು ಕಡೆ ವಿಪರೀತ ಸುಳ್ಳುಗಳನ್ನು ಹೇಳುತ್ತಿದೆ ಎಂದರು. 

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಇಲ್ಲವೇ ಸಿ.ಟಿ.ರವಿ ? ಈ ಪ್ರಶ್ನೆಗೆ ಬಹಿರಂಗವಾಗಿ ಉತ್ತರಿಸಲು ಬಿಜೆಪಿಗೆ ಸವಾಲು ಹಾಕಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಹಕ್ಕು. 

ಫಲಾನುಭವಿಗಳನ್ನು ಅವಮಾನಿಸುವುದನ್ನು ತಕ್ಷಣ ನಿಲ್ಲಿಸಿ ಎಂದು ಎಚ್ಚರಿಸಿದರು. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ. ಆದರೆ, ಕಾಂಗ್ರೆಸ್, ಹಸಿವು ಮುಕ್ತ ಭಾರತ ನಿರ್ಮಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. 

ನೀವು ಸ್ವತಂತ್ರ ಭಾರತದ ಇತಿಹಾಸ ನೋಡಿದರೆ ಹಸಿವು ಮುಕ್ತ ಭಾರತಕ್ಕಾಗಿ ಕಾಂಗ್ರೆಸ್ ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿತು ಎನ್ನುವ ಪಟ್ಟಿಯೇ ಸಿಗುತ್ತದೆ ಎಂದರು. 

ಗ್ಯಾರಂಟಿ ನಿರಂತರ: ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ 5 ಗ್ಯಾರಂಟಿಗಳು ಐದು ವರ್ಷಗಳ ಕಾಲ ಇರುತ್ತದೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಪ್ರಸ್ತಾಪ ಮಾಡಿರುವುದನ್ನು ಉಲ್ಲೇಖಿಸಿದ ಸಿಎಂ, ಈ ಒಂದೇ ಅವಧಿ ಮಾತ್ರವಲ್ಲ, ಮುಂದಿನ ಬಾರಿಯೂ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. 

ನಂತರದ ಅವಧಿಯಲ್ಲೂ ಅಧಿಕಾರದಲ್ಲಿ ರುತ್ತದೆ. ಹಾಗಾಗಿ ಈ ಗ್ಯಾರಂಟಿಗಳು ನಿರಂತರವಾಗಿ ಜಾರಿಯಲ್ಲಿರುತ್ತವೆ ಎಂದರು. ಬಡತನ ಇರುವವರೆಗೆ ಈ ಗ್ಯಾರಂಟಿಗಳು ಜಾರಿಯಲ್ಲಿರುತ್ತವೆ. 

ಮುಂದೆ ರಾಜ್ಯದಲ್ಲಿ ಯಾವತ್ತೂ ಕೂಡ ಬೇರೆ ಪಕ್ಷದವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. 

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌, ಶಾಸಕರಾದ ಟಿ.ಡಿ. ರಾಜೇಗೌಡ, ನಯನಾ ಮೋಟಮ್ಮ, ಶ್ರೀನಿವಾಸ್, ಆನಂದ್, ಕೋನರೆಡ್ಡಿ, ಮಾಜಿ ಸಚಿವರಾದ ಮೋಟಮ್ಮ, 

ಬಿ.ಬಿ. ನಿಂಗಯ್ಯ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ, ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಮುಖ್ಯಮಂತ್ರಿಯವರು ನುಡಿದಂತೆ ನಡೆದಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಚಿಕ್ಕಮಗಳೂರು ಕ್ಷೇತ್ರದ ಜನರಿಗೆ ತುಂಬಾ ಅನುಕೂಲವಾಗಿದೆ. 

ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳ ಕೆರೆ ತುಂಬಿಸುವ ಭದ್ರಾ ಉಪಕಣಿವೆ ಯೋಜನೆ 2 ಮತ್ತು 3ನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಬೇಕು. ಒಳಚರಂಡಿ ಕಾಮಗಾರಿಯಿಂದ ಚಿಕ್ಕಮಗಳೂರು ನಗರದ ರಸ್ತೆಗಳು ಹಾಳಾಗಿವೆ. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು.- ಎಚ್‌.ಡಿ. ತಮ್ಮಯ್ಯಶಾಸಕರು, ಚಿಕ್ಕಮಗಳೂರು ಕ್ಷೇತ್ರ

ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರೂ ಪ್ರತಿಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಅರ್ಥಿಕವಾಗಿ ಸರ್ಕಾರ ದಿವಾಳಿ ಯಾಗಿದೆ ಎನ್ನುತ್ತಿದ್ದಾರೆ. ರಸ್ತೆ, ಸೇತುವೆ ನಿರ್ಮಾಣ ಮಾತ್ರ ಅಭಿವೃದ್ಧಿ ಅಂದುಕೊಂಡಿದ್ದಾರೆ.

 ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಮಟ್ಟ ಸುದಾರಣೆಯಾಗಿದೆ. ಇದು ಕೂಡ ಅಭಿವೃದ್ಧಿ ಎಂಬುದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಗ್ಯಾರಂಟಿ ಜತೆಗೆ ರಾಜ್ಯ ಸರ್ಕಾರ ಉತ್ತಮ ಬಜೆಟ್‌ ನೀಡಿದೆ. ನಮ್ಮ ಸರ್ಕಾರ 5 ವರ್ಷ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ.- ನಯನಾ ಮೋಟಮ್ಮಶಾಸಕಿ, ಮೂಡಿಗೆರೆ ಕ್ಷೇತ್ರ

ಕಡೂರು ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳು ಶೇ. 98 ರಷ್ಟು ಯಶಸ್ವಿಯಾಗಿವೆ. ಬಹುತೇಕ ಎಲ್ಲಾ ಮಹಿಳೆಯರಿಗೆ ಅನುಕೂಲವಾಗಿದೆ. ಕಡೂರು ಕ್ಷೇತ್ರ ಬರ ಪೀಡಿತ ಪ್ರದೇಶ, ಮಳೆ ಬಂದರೆ ಬೆಳೆ, ಇಲ್ಲದೆ ಹೋದರೆ ತುಂಬಾ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಜನರಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆಗಳ ನಿರ್ಮಾಣಕ್ಕೆ ಉತ್ತೇಜನ ನೀಡಬೇಕು.- ಕೆ.ಎಸ್‌.ಆನಂದ್‌ಶಾಸಕರು, ಕಡೂರು ಕ್ಷೇತ್ರ

ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಇದರಿಂದ ಬಡ ಕುಟುಂಬಗಳಿಗೆ ತುಂಬಾ ಅನುಕೂಲವಾಗಿದೆ. 

ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್‌ ಶೋಭಾ ಎನ್ನುತ್ತಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಖಚಿತ. - ಜಿ.ಎಚ್‌. ಶ್ರೀನಿವಾಸ್‌ ಶಾಸಕರು, ತರೀಕೆರೆ ಕ್ಷೇತ್ರ

ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು 7 ತಿಂಗಳಲ್ಲಿ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಕೇಂದ್ರ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರು.

ಅವರು ಹೊರ ಬಂದು ಉತ್ತಮ ಜೀವನ ನಡೆಸಲು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿತು. ಇದರಿಂದ ಮಹಿಳೆಯರ ಕೈಯಲ್ಲಿ ಹಣ ಬಂದಿದ್ದರಿಂದ ಕುಟುಂಬದ ಸಣ್ಣ ಪುಟ್ಟ ಖರ್ಚಿಗೆ ಅನುಕೂಲವಾಗಿದೆ. - ಟಿ.ಡಿ. ರಾಜೇಗೌಡ ಶಾಸಕರು, ಶೃಂಗೇರಿ ಕ್ಷೇತ್ರ

ಪೋಟೋ ಫೈಲ್ ನೇಮ್ 3 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಕಾಫಿ ಬೇಳೆಯನ್ನು ತೂರುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರು ಉದ್ಘಾಟಿಸಿದರು. ಸಚಿವ ಕೆ.ಜೆ. ಜಾರ್ಜ್‌ ಹಾಗೂ ಜಿಲ್ಲೆಯ ಶಾಸಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1ನೇ ಕ್ಲಾಸ್‌ಗೆ ವಯೋಮಿತಿ 5.5 ವರ್ಷಕ್ಕಿಳಿಸಲು ಪೋಷಕರ ಹೋರಾಟ
ಆಟೋ ಎಲ್‌ಪಿಜಿ ಕೊರತೆ ಇಲ್ಲ : ಗ್ರಾಹಕರ ವ್ಯವಹಾರ ಇಲಾಖೆ