- ರೇಣುಕಾಚಾರ್ಯ ನೇತೃತ್ವದ ತಂಡಕ್ಕೆ ಬಿ.ಎಸ್.ಜಗದೀಶ ಸವಾಲು
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭೆ ಚುನಾವಣೆ ಘೋಷಣೆ ಪೂರ್ವದಿಂದ ಫಲಿತಾಂಶದ ನಂತರದ ದಿನಗಳವರೆಗಿನ ಲಗಾನ್ ತಂಡದ ಎಲ್ಲ ಸದಸ್ಯರ ಕಾಲ್ ಲೀಸ್ಟ್, ಲೊಕೇಷನ್ ತೆಗೆಸೋಣ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ನಾವೂ ತೆಗೆಸುತ್ತೇವೆ. ಪಕ್ಷದ ಕಚೇರಿಯಲ್ಲಿ ಕುಳಿತು, ಯಾರ ತಪ್ಪು, ಯಾರದು ಸರಿ ಎಂಬ ಚರ್ಚೆ ಮಾಡಲು ನಾವು ಸಿದ್ಧ, ನೀವು ಸಿದ್ಧರಿದ್ದೀರಾ ಎಂದು ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ.ಎಸ್. ಜಗದೀಶ ಸವಾಲು ಹಾಕಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಕ್ತ ಚರ್ಚೆಗೆ ಬನ್ನಿ. ಯಾವ್ಯಾವ ಮುಖಂಡರ ಜೊತೆ ಯಾರು ಮಾತನಾಡಿದರು, ಏನು ಮಾಡಿದರೆಂಬ ಸ್ಪಷ್ಟ ಮಾಹಿತಿ ಸಿಗುತ್ತದೆ. ಯಾರದು ತಪ್ಪು, ಯಾರದ್ದು ಸರಿ ಎಂಬುದನ್ನು ಪಕ್ಷದ ಕಚೇರಿಯಲ್ಲೇ ಚರ್ಚೆ ಮಾಡೋಣ ಎಂದರು.
ಒಂದು ಸುಳ್ಳನ್ನೇ ನೂರು ಸಲ ಹೇಳಿ, ಸತ್ಯ ಮಾಡಲು ಹೋದರೆ ಅದು ನ್ಯಾಯವೇ? ಬಿಜೆಪಿ ಕಾರ್ಯಕರ್ತರೂ ಈಗ ಜಾಗೃತರಾಗಿದ್ದರು. ಹಿಂದೆಲ್ಲಾ ತಾಂತ್ರಿಕತೆ ಇಷ್ಟು ಮುಂದುವರಿದಿರಲಿಲ್ಲ. ಈಗ ಯಾರು ಏನು ಮಾಡುತ್ತಾರೆ, ಎಲ್ಲಿ ಹೋಗಿ ಬಂದರೆಂಬುದೂ ನಿಖರವಾಗಿ ಗೊತ್ತಾಗುತ್ತದೆ. ಸುಳ್ಳು, ಪಕ್ಷದ್ರೋಹ ಮಾಡುವವರು ಯಾರೆಂಬುದೂ ಗೊತ್ತಾಗುತ್ತದೆ. ತಪ್ಪಿಗೆ ಸೂಕ್ತ ಬೆಲೆ ತೆರಬೇಕಾಗುತ್ತದೆ. ದಾವಣಗೆರೆ ಕ್ಷೇತ್ರದ ಬಿಜೆಪಿ ಸೋಲಿಗೆ ಕಾರ್ಯಕರ್ತರು, ಮುಖಂಡರು ಕಾರಣರಲ್ಲ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.ಬಿಜೆಪಿ ಚಿಹ್ನೆಯಡಿ ಹಿಂದೆಲ್ಲಾ ಗೆದ್ದು, ಉನ್ನತ ಸ್ಥಾನ ಪಡೆದು, ಮೋಸ ಮಾಡಿದವರೇ ಗಾಯತ್ರಿ ಸಿದ್ದೇಶ್ವರರ ಸೋಲಿಗೆ ಕಾರಣ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಅನೇಕರು ತಮ್ಮ ಗುಂಪಿಗೆ ಲಗಾನ್ ಟೀಂ ಅಂತಾ ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಲಗಾನ್ ಟೀಂ ತಂಡದ ಎಲ್ಲರ ಸತ್ಯ, ಪ್ರಾಮಾಣಿಕತೆಯ ಮಾತುಗಳನ್ನೇನಾದರೂ ಆಕಸ್ಮಾತ್ ಈಗೇನಾದರೂ ಸತ್ಯಹರಿಶ್ಚಂದ್ರ ಇದ್ದು, ಲಗಾನ್ ಟೀಂನವರ ಮಾತುಗಳನ್ನು ಕೇಳಿದ್ದರೆ ಮೂರ್ಚೆ ಹೋಗುತ್ತಿದ್ದನಷ್ಟೇ ಎಂದು ಕುಟುಕಿದರು.
ಸಿದ್ದೇಶ್ವರ ತಪ್ಪಿನಿಂದ ಸೋತಿದ್ದಾಗಿ ರೇಣುಕಾಚಾರ್ಯ ಮತ್ತವರ ತಂಡದವರು ದೂರುತ್ತಾರೆ. ಇದೆಲ್ಲವೂ ಶುದ್ಧ ಸುಳ್ಳು. ದಾವಣರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಬರಲು ನಾಲ್ಕು ಅವಧಿಗೆ ಸಂಸದರಾಗಿದ್ದ ಜಿ.ಎಂ. ಸಿದ್ದೇಶ್ವರ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳಿಂದ ತಂದ ಅನುದಾನ, ಯೋಜನೆಗಳು ಕಾರಣ. ಸಿದ್ದೇಶ್ವರ ಬಗ್ಗೆ ಟೀಕಿಸುತ್ತಿರುವ ಲಗಾನ್ ತಂಡದ ಸದಸ್ಯರು ತಾವೇ ಪ್ರಾಮಾಣಿಕರೆಂಬಂತೆ ಮಾತನಾಡುತ್ತಿದ್ದಾರೆ. ಲಗಾನ್ ಟೀಂ ಏನು ಮಾಡಿದೆ, ಏನು ಮಾಡಿಲ್ಲವೆಂಬ ಬಗ್ಗೆ ದಾಖಲೆ, ಸಾಕ್ಷ್ಯ ಸಮೇತ ಚರ್ಚೆಗೆ ಬರಲಿ ಎಂದು ಬಿ.ಎಸ್.ಜಗದೀಶ ಆಹ್ವಾನ ನೀಡಿದರು.- - - (-ಸಾಂದರ್ಭಿಕ ಚಿತ್ರ)