ಹೊಸಪೇಟೆ: ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್ ಕೊರತೆಯಿಂದ ಇತರೆ ವಾಹನಗಳನ್ನು ಅವಲಂಬಿಸಬೇಕಾಗಿದೆ. ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳಿಂದ ಅನೇಕ ಯಶೋಗಾಥೆಗಳನ್ನು ಕಾಣಬಹುದಾಗಿದೆ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಪರಿಶೀಲನೆ ನಡೆಸಿ ಕುಂದುಕೊರತೆಗಳನ್ನು ನಿವಾರಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸಂಸದ ಈ.ತುಕಾರಾಂ ಪ್ರಸ್ತಾಪಿಸಿ ವಿವಿಧ ಮಾರ್ಗಗಳಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ತಯಾರಿಸಿ ಹೆಚ್ಚಿನ ಬೇಡಿಕೆ ಇರುವ ಸಮಯ ಮತ್ತು ಮಾರ್ಗಗಳಲ್ಲಿ ಬಸ್ ಸಂಚರಿಸಲು ಡಿಡಿಪಿಐ ಮತ್ತು ಕೆಕೆಆರ್‌ಟಿಸಿ ಡಿಸಿ ಕ್ರಮ ವಹಿಸಬೇಕೆಂದಾಗ, ಮುಂದಿನ ಸಭೆಗೆ ಡಿಡಿಪಿಐಗೆ ಎಲ್ಲ ವಿವರ ಸಲ್ಲಿಸಲು ಸಚಿವರು ಸೂಚನೆ ನೀಡಿದರು.ಪೋಕ್ಸೋ ತಡೆಗೆ ಜಾಗೃತಿ:
ಹಾಸ್ಟೆಲ್ ಸೇರಿದಂತೆ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳಲ್ಲಿ ಪೋಕ್ಸೋ ತಡೆಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಇತರೆ ಜಿಲ್ಲೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿ ಬಾಲಗರ್ಭಿಣಿಯಾದ ಬಗ್ಗೆ ವರದಿಯಾಗಿದ್ದು, ಜಿಲ್ಲೆಯ ಎಲ್ಲ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತಂದು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಕಳುಹಿಸುವಾಗ ಕಡ್ಡಾಯವಾಗಿ ಪೋಷಕರ ಅನುಮತಿ ಪಡೆದುಕೊಳ್ಳಬೇಕೆಂಬ ನಿಯಮ ಜಾರಿಗೆ ತರಲು ಸೂಚಿಸಿದರು.ಬೆಳೆ ನಷ್ಟ:
ಜಿಲ್ಲೆಯಲ್ಲಿ ಮುಂಗಾರಿನಿಂದಲೂ ಉತ್ತಮ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದ ರೈತರ ಬೆಳೆ ನಷ್ಟವಾಗಿದೆ. ಅದರಲ್ಲಿ ಈರುಳ್ಳಿ ಬೆಳೆ ಹಡಗಲಿ ಮತ್ತು ಹರಪನಹಳ್ಳಿ ತಾಲೂಕಿನಲ್ಲಿ ಹೆಚ್ಚಿನ ನಷ್ಟವಾಗಿದ್ದು ರೈತರು ಕಂಗಲಾಗಿದ್ದಾರೆ ಎಂದು ಶಾಸಕರಾದ ಕೃಷ್ಣನಾಯ್ಕ ಮತ್ತು ಎಂ.ಪಿ.ಲತಾ ಪ್ರಸ್ತಾಪಿಸಿದರು. ಇದಕ್ಕೆ ಸಚಿವರು ನಿಖರವಾದ ಅಂಕಿ ಅಂಶಗಳನ್ನು ಸಂಗ್ರಹಿಸಲು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.ನೀಟ್ ಪ್ರವೇಶಕ್ಕೆ ಯುಡಿಐಡಿ ಸುಳ್ಳು ದಾಖಲೆ ಸೃಷ್ಟಿ:
ಬೆಂಗಳೂರಿನವರು ಹಗರಿಬೊಮ್ಮನಹಳ್ಳಿ ವಿಳಾಸದಲ್ಲಿ ಆಧಾರ್ ಬದಲಿಸಿ ಮೆಡಿಕಲ್ ಸೀಟ್ ಪಡೆಯಲು ಆರೋಗ್ಯ ಇಲಾಖೆ ಕ್ಲಾರ್ಕ್ ಮತ್ತು ವೈದ್ಯರು ಸೇರಿ ಸುಳ್ಳು ದಾಖಲೆ ಸೃಷ್ಟಿಸಿ ಅಂಗವಿಕಲರ ಪ್ರಮಾಣ ಪತ್ರ ವಿತರಣೆ ಮಾಡಿದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಹಿಂದೆ ದೊಡ್ಡ ಜಾಲವಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಚಿವರು ಸೂಚಿಸಿದರು. ಇದಕ್ಕೆ ಪೂರಕ ಮಾಹಿತಿ ನೀಡಿದ ಡಿಎಚ್‌ಓ ಡಾ. ಶಂಕರ ನಾಯ್ಕ ಈಗಾಗಲೇ ವೈದ್ಯರು ಮತ್ತು ಸಿಬ್ಬಂದಿಗೆ ನೊಟೀಸ್ ನೀಡಲಾಗಿದೆ. ಸರ್ಕಾರಕ್ಕೆ 206 ಪುಟಗಳ ವರದಿ ಸಲ್ಲಿಸಲಾಗಿದೆ ಎಂದು ಸಭೆಗೆ ತಿಳಿಸಿದರು.ಸಭೆಯಲ್ಲಿ ಸಂಸದ ಈ.ತುಕಾರಾಮ್, ಶಾಸಕರಾದ ಡಾ.ಎನ್.ಟಿ. ಶ್ರೀನಿವಾಸ್, ಕೆ.ನೇಮರಾಜ ನಾಯ್ಕ, ಕೃಷ್ಣನಾಯ್ಕ, ಎಂ.ಪಿ.ಲತಾ, ಬಿ.ದೇವೇಂದ್ರಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಎಸ್ಪಿ ಎಸ್.ಜಾಹ್ನವಿ, ಎಡಿಸಿ ಇ.ಬಾಲಕೃಷ್ಣಪ್ಪ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಅನುಪಮ ಭಾಗವಹಿಸಿದ್ದರು.
ಸಭೆಯಿಂದ ಗವಿಯಪ್ಪ ದೂರ ದೂರ:ಶಾಸಕ ಎಚ್.ಆರ್. ಗವಿಯಪ್ಪ ಕೆಡಿಪಿ ಸಭೆಯಿಂದ ದೂರ ಉಳಿದರು. ಜಿಲ್ಲಾ ನ್ಯಾಯಾಲಯ ಉದ್ಘಾಟನಾ ಸಮಾರಂಭ ಕುರಿತು ಸ್ಥಳೀಯ ಶಾಸಕರ ಗಮನಕ್ಕೂ ತಂದಿಲ್ಲ. ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಗವಿಯಪ್ಪ ಸಭೆಯಿಂದಲೇ ದೂರ ಉಳಿದಿದ್ದಾರೆ ಎಂದು ಅವರ ಆಪ್ತ ಮೂಲಗಳು ಕನ್ನಡಪ್ರಭಕ್ಕೆ ದೃಢಪಡಿಸಿವೆ.