ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ಶನಿವಾರ ಬೆಳಗಿನಜಾವ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಎಂಟು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ರಭಸಕ್ಕೆ ಮನೆ ಗೋಡೆ ಸಂಪೂರ್ಣ ಕುಸಿದಿದೆ.
ಹೊಸಪೇಟೆ - ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವಕೀಲ ಹಾಲಪ್ಪ ಅವರಿಗೆ ಸೇರಿದ ಮನೆ ಇದೆ. ಮನೆಯಲ್ಲಿ ಸುಮಾರು 10 ಮಂದಿ ಇದ್ದರು. ಶನಿವಾರ ಬೆಳಗ್ಗೆ 5 ಗಂಟೆ ಹೊತ್ತಿಗೆ ಕವಿತಾ ನವರಾತ್ರಿ ನಿಮಿತ್ತ ಬನ್ನಿ ಮಹಾಕಾಳಿ ದೇಗುಲಕ್ಕೆ ಹೋಗಿ ಬಂದು ಟೀ ಮಾಡುವಾಗ ಗ್ಯಾಸ್ ವಾಸನೆ ಬಂದಿದೆ ಎಂದು ಮಲಗಿದ್ದ ತನ್ನ ಪತಿ ಹಾಲಪ್ಪ ಅವರನ್ನು ಎಬ್ಬಿಸಿದ್ದಾರೆ. ಈ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಎಂಟು ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಮನೆ ಶೇ.50ರಷ್ಟು ಧ್ವಂಸವಾಗಿದೆ. ಗಾಯಾಳುಗಳನ್ನು ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಜಖಂಗೊಂಡ ಮನೆಯಲ್ಲಿ ರಕ್ಷಣಾ ಕಾರ್ಯ ಕೈಗೊಂಡರು.
ಸಚಿವ ಜಮೀರ್ ಭೇಟಿ:ಅಡುಗೆ ಸಿಲಿಂಡರ್ ಅವಘಡ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಎನ್.ಟಿ. ಶ್ರೀನಿವಾಸ್, ಹುಡಾ ಅಧ್ಯಕ್ಷ ಎಚ್.ಎನ್. ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ಜಾಹ್ನವಿ, ಎಎಸ್ಪಿ ಮಂಜುನಾಥ ಇದ್ದರು.