ಕಾರವಾರ: ಜಿಎಸ್‌ಟಿ ಇಳಿಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರ ಪರವಾಗಿ ನಿರ್ಣಯ ಕೈಗೊಂಡಿದೆ. ಇದರಿಂದ ಜನರ ಖರೀದಿ ಸಾಮರ್ಥ್ಯ ಹೆಚ್ಚಲಿದೆ. ಜತೆಗೆ ಉಳಿತಾಯವೂ ಆಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ದಿನ ಬಳಕೆ ವಸ್ತುಗಳು, ಔಷಧ, ಆಹಾರ ಸಾಮಗ್ರಿಗಳು ಸೇರಿದಂತೆ ಜನಸಾಮಾನ್ಯರು ಹೆಚ್ಚು ಬಳಸುವ ವಸ್ತುಗಳ ಜಿಎಸ್‌ಟಿ ಇಳಿಕೆಯಾಗಿದೆ. ಮುಂಚೆ ಇದ್ದ ನಾಲ್ಕು ಸ್ಲ್ಯಾಬ್‍ಗಳನ್ನು ಎರಡು ಸ್ಲ್ಯಾಬ್‌ಗೆ ಸರ್ಕಾರ ಇಳಿಸಿದೆ. ತೆರಿಗೆ ಹೊರೆ ತಪ್ಪಲಿರುವ ಕಾರಣ ವಸ್ತುಗಳ ಬೆಲೆ ಕಡಿಮೆಯಾಗಲಿದ್ದು, ಬಡ ಮತ್ತು ಮಧ್ಯಮ ವರ್ಗದ ಮೇಲೆ ಆರ್ಥಿಕ ಹೊರೆ ಬೀಳುವುದು ತಪ್ಪಲಿದೆ ಎಂದರು.
ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು. ಈ ಮೂಲಕ ಸಣ್ಣ ಉದ್ದಿಮೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಜತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಬೆಂಗಾವಲಾಗಬೇಕು. ಸ್ವದೇಶಿ ಉತ್ಪನ್ನ ಬಳಕೆ ಹೆಚ್ಚಿದಂತೆ ದೇಶವೂ ಸ್ವಾವಲಂಬಿ ರಾಷ್ಟ್ರವಾಗಿ ಬದಲಾಗಲಿದೆ ಎಂದು ಕರೆ ನೀಡಿದರು.ಮಾರುಕಟ್ಟೆಯಲ್ಲಿನ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಜಿಎಸ್‌ಟಿ ಇಳಿಕೆ ಬಳಿಕ ವಹಿವಾಟಿನಲ್ಲಿ ಉಂಟಾದ ಬದಲಾವಣೆ ಬಗ್ಗೆ ವ್ಯಾಪಾರಿಗಳು, ಗ್ರಾಹಕರಿಂದ ಮಾಹಿತಿಯನ್ನೂ ಪಡೆದರು.
ದ್ವಂದ್ವ ನೀತಿಯ ರಾಜ್ಯ ಸರ್ಕಾರ: ಜಿಎಸ್‌ಟಿ ಸಲಹಾ ಸಮಿತಿ ಸಭೆಯಲ್ಲಿ ದರ ಇಳಿಕೆಗೆ ಸಹಮತ ಸೂಚಿಸಿದ ರಾಜ್ಯ ಸರ್ಕಾರವು ಈಗ ಜಿಎಸ್‌ಟಿ ದರ ಇಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.