ಕೊಪ್ಪಳ: ಪೆಂಕಾಕ್ ಸಿಲತ್ ಅಪರೂಪದ ಸಮರ ಕಲೆ ಅನಿಸುತ್ತದೆ. ಈ ಕ್ರೀಡೆಯ ಬೆಳವಣಿಗೆಗೆ ಸಹಕಾರ ನೀಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಶ್ರೀನಿವಾಸ ಗುಪ್ತಾ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತೀಯ ಪೆಂಕಾಕ್ ಸಿಲತ್ ಫೆಡರೇಷನ್, ನವದೆಹಲಿ, ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಗಂಗಾವತಿ-ಕೊಪ್ಪಳ ಮತ್ತು ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ಸೆ. 26 ರಿಂದ ಸೆ. 28ರ ವರೆಗೆ ನಡೆಯುತ್ತಿರುವ 13ನೇ ರಾಷ್ಟ್ರಮಟ್ಟದ ಪೆಂಕಾಕ್ ಸಿಲತ್ ಚಾಂಪಿಯನ್‌ಶಿಪ್ ಗೆ ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದ ಅವರು, ಜಿಲ್ಲೆಯಲ್ಲಿ ಇಂತಹ ಕ್ರೀಡೆ ನಡೆದಿರುವದು ವಿಸ್ಮಯ ಅನಿಸುತ್ತದೆ. ಈ ಕ್ರೀಡೆ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲವಾದರೂ ನೋಡುವದರಿಂದ ಅದೊಂದು ಅಪರೂಪದ ಸಮರದ ಕಲೆ ಅನಿಸುತ್ತದೆ. ಇದರ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ರಾಷ್ಟ್ರಮಟ್ಟದ ಇಂತಹ ಕ್ರೀಡಾಕೂಟ ಆಯೋಜಿಸಲು ಸಂಸದ ರಾಜಶೇಖರ ಹಿಟ್ನಾಳ, ಅಮರೇಗೌಡ ಬಯ್ಯಾಪೂರ ಮತ್ತು ಅನೇಕರು ದೊಡ್ಡ ಸಹಕಾರ ಕೊಟ್ಟಿದಾರೆ. ಮೊದಲ ಬಾರಿಗೆ ಇಂತಹ ಅಮೋಘ ಕ್ರೀಡಾ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆದಿದೆ. ರಾಜ್ಯ ಸರ್ಕಾರ ಕ್ರೀಡಾ ಇಲಾಖೆಯ ಮಾನ್ಯತೆ ಬಾಕಿ ಇದ್ದು, ಅದೊಂದು ಸಿಕ್ಕರೆ ರಾಜ್ಯದಲ್ಲಿ ಈ ಸಿಲತ್ ಕ್ರೀಡೆ ಮೂಲಕ ಸಾಕಷ್ಟು ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ರಾಜ್ಯ ಅಸೋಸಿಯೇಷನ್ ಇರುವ ಈ ಕ್ರೀಡೆಗೆ ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ಕೊಡಬೇಕು ಎಂದರು.
ಕೊಪ್ಪಳದಲ್ಲಿ ನಡೆಯುತ್ತಿರುವ 13ನೇ ರಾಷ್ಟ್ರಮಟ್ಟದ ಪೆಂಕಾಕ್ ಸಿಲತ್ ಚಾಂಪಿಯನ್‌ಶಿಪ್ ನಲ್ಲಿ ಸಿಂಗಾ, ಮೆಕಾನ್, ಪ್ರಿ-ಟೀನ್, ಸಬ್ ಜೂನಿಯರ್ ಮತ್ತು ಜೂನಿಯರ್ ಹೀಗೆ ಐದು ವಿಭಾಗಗಳಿರುತ್ತವೆ.ಕಾರ್ಯಕ್ರಮದಲ್ಲಿ ಭಾರತೀಯ ಪೆಂಕಾಕ್ ಸಿಲತ್ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷೆ ಫಲಿಯಾ ಥಾಮಸ್, ರಾಷ್ಟ್ರೀಯ ಖಜಾಂಚಿ ತಾರಿಖ್ ಅಹ್ಮದ್ ಜರ್ಗಾರ್, ವೆಸ್ಟ್ ಝೋನ್ ಅಧ್ಯಕ್ಷ ಅಲೆಕ್ಸಾಂಡರ್ ಥಾಮಸ್, ಕರ್ನಾಟಕ ರಾಜ್ಯ ಪಂಕಾಕ್ ಸಿಲತ್ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಅಲಂಪಳ್ಳಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಜಿಪಂ ಕೆಡಿಪಿ ಸದಸ್ಯ ದೊಡ್ಡಬಸನಗೌಡ ಬಯ್ಯಾಪೂರ, ಕೊಪ್ಪಳ ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಸೋಮಶೇಖರ್ ಹಿಟ್ನಾಳ, ಹನುಮಸಾಗರ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಾಚಲಾಪೂರ, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಪ್ರಲ್ಹಾದರಾವ್ ದೇಸಾಯಿ, ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಬಸವ ಬಂಡಿಹಾಳ, ಶಿಕ್ಷಕ ಬಸವರಾಜ ಇತರರಿದ್ದರು.