ಯಲಬುರ್ಗಾ: ಜನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಸಮಿತಿಯು ಕೆಲಸ ಮಾಡುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಹಸನಾಗಿದೆ. ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಎಂದರು.
೨೦೨೩-೨೫ ರವರೆಗೆ ೬೦೭೮೩ ಜನ ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳಿದ್ದಾರೆ. ಎನ್‌ಪಿಸಿಎಲ್‌ನಿಂದ ೩೬೦ ಅರ್ಹ ಫಲಾನುಭವಿಗಳಿದ್ದಾರೆ ಎಂದು ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ಸಭೆಯಲ್ಲಿ ತಿಳಿಸಿದರು.ಅನ್ನಭಾಗ್ಯ ಯೋಜನೆಯಡಿ ಯಲಬುರ್ಗಾ-ಕುಕನೂರು ತಾಲೂಕಿನ ೫೮೫೪೨ ಜನ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಆಹಾರ ಇಲಾಖೆ ಶಿರಸ್ತೇದಾರ ಮಲ್ಲಿಕಾರ್ಜುನ ಶಾಸ್ತ್ರೀಮಠ ತಿಳಿಸಿದರು. ಫಲಾನುಭವಿಗಳಿಗೆ ತಿಂಗಳಲ್ಲಿ ಮೂರು ದಿನ ಮಾತ್ರ ಪಡಿತರ ವಿತರಿಸಲಾಗುತ್ತಿದೆ. ಇದರಿಂದ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ತಿಂಗಳಲ್ಲಿ ೨೫ ದಿನಗಳವರೆಗೆ ಪಡಿತರ ಹಂಚಿಕೆ ಮಾಡಬೇಕು. ಈ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಡ್ಡಾಯ ಸೂಚನೆ ನೀಡಬೇಕು ಎಂದು ಗ್ಯಾರಂಟಿ ಸಮಿತಿಯ ಸದಸ್ಯರು ಸಭೆಯಲ್ಲಿ ತಾಕೀತು ಮಾಡಿದರು.
ತಾಲೂಕಿನಲ್ಲಿ ಕೆಕೆಆರ್‌ಟಿಸಿ ನಿಗಮದಿಂದ ಶಕ್ತಿ ಯೋಜನೆಯಡಿ ೨೦೨೩-೨೫ರವರೆಗೆ ೧.೪೨ ಕೋಟಿ ಫಲಾನುಭವಿಗಳು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಘಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಆಲೂರು ಹೇಳಿದರು.
ಜೆಸ್ಕಾಂ ಎಇಇ ಮಹ್ಮದ್ ಖಲೀಮುದ್ದೀನ್ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ೨೮೨೩೦ ಗ್ರಾಹಕರಲ್ಲಿ ೨೭೩೮೨ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕುಕನೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒಗಳಾದ ನೀಲಗಂಗಾ, ಸಂತೋಷ ಪಾಟೀಲ್, ಸಮಿತಿ ಸದಸ್ಯರು ಇತರರು ಇದ್ದರು.