ಕಾರವಾರ: ಪಹರೆ ವೇದಿಕೆಯ ಒಳ್ಳೆಯ ಕೆಲಸ ದೇಶಕ್ಕೆ ಮಾದರಿ. ಇದನ್ನು ಪ್ರಧಾನಿಗೆ ತಿಳಿಸುವ ಜವಾಬ್ದಾರಿ ನನ್ನದು. ಪ್ರಧಾನಿಯಿಂದ ಖಂಡಿತಾ ಪಹರೆಗೆ ಪತ್ರ ಬರಲಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಸಿರಸಿ ಅರಣ್ಯ ವೃತ್ತದ ಸಿಸಿಎಫ್ ಡಾ. ಹೀರಾಲಾಲ, ಕಸವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು. ವಿಶ್ವದಲ್ಲಿ ೧೮ ಬಯೋ ಡೈವರ್ಸಿಟಿ ಹಾಟ್‌ಸ್ಪಾಟ್‌ಗಳಿವೆ. ಅದರಲ್ಲಿ ನಮ್ಮ ಪಶ್ಚಿಮ ಘಟ್ಟವೂ ಒಂದು. ಅದನ್ನು ಮಾಲಿನ್ಯದಿಂದ ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಕಾರವಾರದ ಪರಿಸರವನ್ನು ಕಳೆದ ಹತ್ತು ವರ್ಷಗಳಿಂದ ಸ್ವಚ್ಛಗೊಳಿಸುತ್ತಿರುವ ಪಹರೆ ಸಂಸ್ಥೆಯು ಇನ್ನಷ್ಟು ಸಾಧನೆ ಮಾಡಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಪಹರೆ ವೇದಿಕೆಯ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಪಹರೆ ವೇದಿಕೆಯವರು ಪ್ರತಿವಾರದ ಒಂದು ಗಂಟೆಯ ಸ್ವಚ್ಛತಾ ಸೇವೆ ಎಲ್ಲೆಡೆಯೂ ಮಾದರಿಯಾಗಬೇಕಿದೆ. ಕಾರವಾರ ನಗರದ ಸ್ವಚ್ಛತೆಯಲ್ಲಿ ಪಹರೆ ವೇದಿಕೆಯ ಕೊಡುಗೆ ಅಪಾರವಾಗಿದೆ ಎಂದರು.
ಪ್ರಾರಂಭೋತ್ಸವದಲ್ಲಿ ಹತ್ತಾರು ಕಾರ್ಯ: ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಳಿಕ ಸ್ವಚ್ಛತೆಯ ಕುರಿತು ಜಾಗೃತಿ ಸ್ಟಿಕರ್ ಬಿಡುಗಡೆ ಮಾಡಲಾಯಿತು. ಅಲ್ಲದೇ ಸಾವಿರ ಗಿಡ ವಿತರಿಸುವ ಕಾರ್ಯಕ್ರಮದ ಅಂಗವಾಗಿ ಹನ್ನೊಂದು ಜನರಿಗೆ ವೇದಿಕೆಯಲ್ಲೇ ಹಣ್ಣಿನ ಸಸಿಗಳನ್ನು ನೀಡಲಾಯಿತು. ಅಲ್ಲದೆ ಇದುವರೆಗೂ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೆ.ಡಿ. ಪೆಡ್ನೇಕರ್, ರಮೇಶ ಗುನಗಿ, ಸುರೇಶ ನಾಯ್ಕ, ಸದಾನಂದ ಮಾಂಜ್ರೇಕರ್, ಪ್ರಕಾಶ ಕೌರ್, ಖೈರುನ್ನಿಸಾ ಶೇಖ್, ಜಿಡಿ ಮನೋಜೆ ಮತ್ತು ಹಾಲಿ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಆವರಣದಲ್ಲಿದ್ದ ಶಿವಾಜಿ ಪ್ರತಿಮೆಗೆ ಸಂಸದ ಕಾಗೇರಿ ಮಾಲಾರ್ಪಣೆ ಮಾಡಿ, ಶಿವಾಜಿ ತಾಯಿ ಜೀಜಾಬಾಯಿ ಹೆಸರಲ್ಲಿ ಗಿಡವನ್ನು ನೆಟ್ಟರು. ಬಳಿಕ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರೊಂದಿಗೆ ಬುಟ್ಟಿ ಹಿಡಿದು ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿದರು.
ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಯಲ್ಲಿ ಇಂದಿಗೂ ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಿದೆ. ಕುಡಿಯುವ ನೀರಿಗಾಗಿ ಪಾನಿ ಪಾರ್ಲಿಮೆಂಟ್ ಎಂಬ ಹೊಸ ಯೋಜನೆ ಮಾಡುವ ಕನಸು ಪಹರೆ ವೇದಿಕೆ ಹೊಂದಿದೆ ಎಂದು ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.