ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ನಡೆಯುತ್ತಿರುವ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳ 79ನೇ ಜಯಂತ್ಯುತ್ಸವ ಮತ್ತು 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಮಾತೃ ಸಂಗಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀಮಠ ಯಾವುದೇ ತಾರತಮ್ಯ ಮಾಡದೇ ಮಾತೃ ಪ್ರೀತಿಯನ್ನು ಎಲ್ಲ ಹೆಣ್ಣು ಮಕ್ಕಳಿಗೂ ತೋರಿಸುತ್ತಿದೆ ಎಂದರು.
ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅಪಾರ. ಒಬ್ಬ ಗೃಹಿಣಿ ಮತ್ತು ಒಬ್ಬ ರೈತ ತಾವು ಮಾಡುವ ಕೆಲಸಗಳನ್ನು ಅತ್ಯಂತ ನಿಷ್ಠೆ, ಪರಿಶುದ್ಧ, ಪ್ರಾಮಾಣಿಕತೆಯಿಂದ ಮಾಡಿದರೆ 2047ಕ್ಕೆ ವಿಶ್ವದಲ್ಲಿಯೇ ಭಾರತ ದೇಶ ನಂಬರ್ ಒನ್ ರಾಷ್ಟ್ರವಾಗಿ ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು.ದೇಶದಲ್ಲಿ 140 ಕೋಟಿ ಜನಸಂಖ್ಯೆಗೂ ಹೆಚ್ಚಾಗುವಷ್ಟು ಹಣ್ಣು, ತರಕಾರಿ, ಧಾನ್ಯ, ಹಾಲು ಇನ್ನಿತರೆ ಪದಾರ್ಥಗಳು ನಮ್ಮಲ್ಲಿ ಉತ್ಪಾದನೆಯಾಗುತ್ತಿವೆ. ನಮ್ಮ ದೇಶದ ತೆಂಗು ಉತ್ಪನ್ನಗಳಿಗೆ ಅಮೆರಿಕಾ, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ ಇದೆ. ಇದಕ್ಕೆ ಪೂರಕವಾಗಿ ಮಹಿಳೆಯರಿಗೆ ವಿಶೇಷ ಸಾಲ ಸೌಲಭ್ಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಮತ್ತು ಆಹಾರ ಸಂಸ್ಕರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸಿದ್ದವಿದೆ ಎಂದರು.
ದೇಶಕ್ಕೆ ಅನ್ನ ನೀಡುವ ಮತ್ತು ನಾಡನ್ನು ಸಮೃದ್ಧಿ ಮಾಡುವರು ರೈತರು. ಅದಕ್ಕಾಗಿಯೇ ಈ ಮಠವನ್ನು ಕಟ್ಟಿಬೆಳೆಸುವ ಸಂದರ್ಭದಲ್ಲಿ ರೈತರೇ ಆಧಾರ ಸ್ಥಂಭಗಳೆಂದು ಭಾವಿಸಿದ್ದ ಭೈರವೈಕ್ಯಶ್ರೀಗಳು ಶ್ರೀಮಠವನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ ಎಂದರು.
ಹೆಣ್ಣು ಮಕ್ಕಳು ಎಲ್ಲಿಯೇ ಹೋದರೂ ಸಹ ತಮ್ಮ ತನವನ್ನು ಉಳಿಸಿಕೊಳ್ಳಬೇಕು. ಸಂಸ್ಕೃತಿ ಸಂಸ್ಕಾರ ಕಾಪಾಡಿಕೊಂಡಲ್ಲಿ ಎಷ್ಟು ಎತ್ತರಕ್ಕಾದರೂ ಬೆಳೆಯಬಹುದು. ಇದು ಭೈರವೈಕ್ಯ ಶ್ರೀಗಳ ಕನಸೂ ಕೂಡ ಆಗಿತ್ತು ಎಂದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿ ನುಡಿದರು. ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿದರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಚುಂಚಾದ್ರಿ ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸಹಸ್ರಾರು ಸಂಖ್ಯೆಯ ಸದಸ್ಯರು ಮತ್ತು ಭಕ್ತರು ಇದ್ದರು.