ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ವಳಗೆರೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪ್ರಸಕ್ತ ಸಾಲಿನಿಂದ ದ್ವಿಭಾಷ ಮಾಧ್ಯಮ ಶಾಲೆಯಾಗಿ ಪರಿವರ್ತನೆಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಸಸ್ಯ ಶಾಮಲಾ ಫೌಂಡೇಶನ್‌ನಿಂದ ಸೋಮವಾರ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ಹಾಗೂ ಗ್ರೀನ್ ಬೋರ್ಡ್ ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಫೌಂಡೇಶನ್ ಅಧ್ಯಕ್ಷೆ ಸೌಮ್ಯಶ್ರೀ ಮುಕುಂದ, ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳಂತೆ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂಬ ಉದ್ದೇಶದಿಂದ ನಾನು ಸಸ್ಯ ಶಾಮಲಾ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಗ್ರಾಮದ ಮಕ್ಕಳು ಸ್ಪೋಕನ್ ಇಂಗ್ಲೀಷ್ ಕಲಿಯಬೇಕೆಂಬ ಉದ್ದೇಶದಿಂದ ತರಗತಿಗಳನ್ನು ಸಹ ಆರಂಭಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ಶಾಲೆ ಮಕ್ಕಳು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಸ್ಯ ಶಾಮಲಾ ಫೌಂಡೇಶನ್ ಅಭಯ್, ಅಮೂಲ್ಯ, ರೈತ ಸಂಘದ ಅಧ್ಯಕ್ಷ ರಾಂಪುರ ಸೀತಾರಾಮ್, ಅನಿಲ್ ಕುಮಾರ್, ಮುಖ್ಯ ಶಿಕ್ಷಕ ಡಿ.ಮಹಾದೇವಪ್ಪ, ಶಿಕ್ಷಕರಾದ ಆರ್.ಎನ್. ನಾಗೇಂದ್ರ, ಎಂ.ಎಸ್. ಚಂದ್ರಕಲಾ, ಬಿ.ಸಿ.ವೆಂಕಟಲಕ್ಷ್ಮಿ, ಎಚ್. ಅರುಣ್, ಕಾಜಿಮಿಸುಲ್ತಾನ, ಕೆ.ವಿ.ಹರ್ಷ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಇಂದಿರಾ ಹಾಗೂ ಸದಸ್ಯರು ಭಾಗವಹಿಸಿದ್ದರು.


ರೈತರು ಕಡ್ಡಾಯವಾಗಿ ಇ-ಕೆವೈಸಿ ನೋಂದಣಿ ಮಾಡಿಸಲು ಮನವಿ

ಮದ್ದೂರು:ಕೇಂದ್ರ ಸರ್ಕಾರದ ಕೃಷಿಗೆ ಸಂಬಂಧಿಸಿದ ಯೋಜನೆಗಳ ಪ್ರಯೋಜನ ಪಡೆಯಲು ತಾಲೂಕಿನ ಎಲ್ಲಾ ರೈತರು ಕಡ್ಡಾಯವಾಗಿ ಇ-ಕೆವೈಸಿ ನೋಂದಣಿ ಮಾಡಿಸುವ ಮೂಲಕ ಕೇಂದ್ರದ ಗುರುತು ಸೆಂಟ್ರಲ್ ಐಡಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಎಚ್‌.ಜಿ.ಪ್ರತಿಭಾ ತಿಳಿಸಿದ್ದಾರೆ.

ತಾಲೂಕಿನ 55090 ಮಂದಿ ರೈತರು ಈಗಾಗಲೇ ನೋಂದಣಿ ಮಾಡಿಸಿದ್ದು,10196 ಮಂದಿ ರೈತರ ಸೆಂಟ್ರಲ್ ಐಡಿ ಗುರುತು ಬಾಕಿ ಇರುವುದರಿಂದ ಇ-ಕೆವೈಸಿ ಮಾಡಿಸದ ರೈತರು ಪ್ರಧಾನಮಂತ್ರಿಗಳ ಕಿಸಾನ್ ಯೋಜನೆ ಸೇರಿದಂತೆ ಮತ್ತಿತರ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ರೈತರು ಈ ಕೂಡಲೇ ಕೃಷಿ ಇಲಾಖೆ, ತೋಟಗಾರಿಕೆ, ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಪಹಣಿ, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡಿ ಸೆಂಟ್ರಲ್ ಐಡಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಕೃಷಿ ಅಧಿಕಾರಿ ಪ್ರತಿಭಾ ರೈತರಲ್ಲಿ ಮನವಿ ಮಾಡಿದ್ದಾರೆ.