ಪಾಂಡವಪುರ:
ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ನವೀಕರಿಸಬಹುದಾದ ಇಂಧನ ವಲಯದ ಪ್ರಮುಖ ಸಂಸ್ಥೆ ಸೆಲ್ಕೋ ಫೌಂಡೇಶನ್ ಸಹಯೋಗದೊಂದಿಗೆ ಮೇಲುಕೋಟೆ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮಗಳ ಕೊಳವೆ ಬಾವಿಗಳಿಗೆ ಸೋಲಾರ್ ಪಂಪ್ ಅಳವಡಿಕೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.ತಾಲೂಕಿನ ಬೋರಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗೆ ಸೋಲಾರ್ ಪಂಪ್ ಲೋಕಾರ್ಪಣೆಗೊಳಿಸಿದ ಶಾಸಕರು, ನಂತರ ಅರಕನಕೆರೆ, ಕದಲಗೆರೆ ಗ್ರಾಮದ ಬಳಿ ಸೋಲಾರ್ ಪಂಪ್‌ನ್ನು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ಮೂರು ಗ್ರಾಮಗಳ ಕುಡಿಯುವ ನೀರಿನ ಬೋರ್‌ವೆಲ್ ಗಳಿಗೆ ಸಮಸ್ಯೆಗಳಾಗದಂತೆ ಸೋಲಾರ್ ಪಂಪ್ ಅಳವಡಿಸಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ವಿದ್ಯುತ್ ಗ್ರಿಡ್ ಮೇಲೆ ಅವಲಂಬಿತವಾಗದೆ ಸೋಲಾರ್ ವಿದ್ಯುತ್ ಮೂಲಕವೇ ಈ ಪಂಪ್‌ಗಳು ಕಾರ್ಯನಿರ್ವಹಿಸುತ್ತವೆ ಎಂದರು.ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ಈ ಯೋಜನೆ ಜಾರಿ ಯಶಸ್ವಿಯಾದರೆ ಎಲ್ಲ ಗ್ರಾಮಗಳಲ್ಲಿ ವಿಸ್ತರಿಸಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇದನ್ನು ಸರ್ಕಾರದ ಗಮನಕ್ಕೆ ತರಲಾವುದು ಎಂದರು.
ಈ ಸೋಲಾರ್ ಪಂಪ್‌ಗಳ ಅಳವಡಿಕೆಯಿಂದಾಗಿ ಗ್ರಾಮಸ್ಥರಿಗೆ ನಿರಂತರ ವಿದ್ಯುತ್ ಕಡಿತ ಅಥವಾ ಲೋಡ್ ಶೆಡ್ಡಿಂಗ್ ಆತಂಕವಿಲ್ಲದೆ ಶುದ್ಧ ಕುಡಿಯುವ ನೀರು ಸಿಗಲಿದೆ. ಜೊತೆಗೆ ಗ್ರಾಪಂಗಳ ವಿದ್ಯುತ್ ಬಿಲ್ ಹೊರೆಯೂ ಗಣನೀಯವಾಗಿ ಕಡಿಮೆಯಾಗಲಿದೆ. ಇದೊಂದು ಸಂಪೂರ್ಣ ಪರಿಸರ ಸ್ನೇಹಿ ಮತ್ತು ಆರ್ಥಿಕ ಸ್ವಾವಲಂಬನೆ ಯೋಜನೆಯಾಗಿದೆ ಎಂದು ತಿಳಿಸಿದರು.
ಈ ವೇಳೆ ಪುಟ್ಟಣ್ಣಯ್ಯ ಫೌಂಡೇಷನ್ ಸಿಇಒ ಹಿರೇಮರಳಿ ರಣಜಿತ್, ಬೋರಾಪುರ, ಅರಕನಕೆರೆ, ಕದಲಗೆರೆ ಹಾಗೂ ಕಾಡೇನಹಳ್ಳಿ ಗ್ರಾಮಸ್ಥರು ಹಾಗೂ ರೈತಸಂಘದ ಮುಖಂಡರು ಹಾಜರಿದ್ದರು.