ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕಾಡೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನ ಸುಸಜ್ಜಿತ ಸಭಾಂಗಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.ಈ ಯೋಜನೆಯನ್ನು ರಾಜ್ಯ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ ಆರ್) ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಗುಣಮಟ್ಟದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಂದಾಜು ಒಟ್ಟು 15 ಲಕ್ಷ ರು. ವೆಚ್ಚ ನಿಗದಿಪಡಿಸಲಾಗಿದೆ.
ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಾರ್ಥನಾ ಸಭೆಗಳು ಹಾಗೂ ಶೈಕ್ಷಣಿಕ ಸಮಾರಂಭಗಳನ್ನು ನಡೆಸಲು ಈ ಸಭಾಂಗಣ ಮುಂಬರುವ ದಿನಗಳಲ್ಲಿ ಅತ್ಯಂತ ಸಹಕಾರಿಯಾಗಲಿದೆ.ಬಳಿಕ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ನಾವು ಸದಾ ಬದ್ಧವಾಗಿದ್ದೇವೆ. ಕೆ.ಎಸ್.ಎಂ.ಸಿ ಸಂಸ್ಥೆ ತನ್ನ ಸಿ.ಎಸ್.ಆರ್ ನಿಯ ಮೂಲಕ ಕಾಡೇನಹಳ್ಳಿ ಶಾಲೆ ಅಭಿವೃದ್ಧಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದರು.
ನಿರ್ಮಾಣ ಕಾಮಗಾರಿಯನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಪಾರದರ್ಶಕ, ಗುಣಮಟ್ಟದಿಂದ ನಿರ್ವಹಿಸಬೇಕು ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಪ್ರಮುಖ ಮುಖಂಡರು, ಶಾಲೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ, ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳು, ಗ್ರಾಮದ ಹಿರಿಯರು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಡೇರಿ ಅಧ್ಯಕ್ಷರಾಗಿ ಎಸ್.ಪಿ.ಶ್ರೀನಿವಾಸ್ ಅವಿರೋಧ ಆಯ್ಕೆಪಾಂಡವಪುರ:ಪಟ್ಟಣದ ಹಾರೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಪಿ.ಶ್ರೀನಿವಾಸ್ (ಬಂಕ್ ಶೀನಣ್ಣ) ಅವಿರೋಧವಾಗಿ ಆಯ್ಕೆಯಾದರು.
ಸಂಘದ ಈ ಹಿಂದಿನ ಅಧ್ಯಕ್ಷ ಕೃಷ್ಣೇಗೌಡರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಎಸ್.ಪಿ.ಶ್ರೀನಿವಾಸ್ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ, ಸಂಘದ ಕಾರ್ಯದರ್ಶಿ ರಾಕಿ ನೂತನ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ನೂತನ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಮಾತನಾಡಿ, ಎಲ್ಲಾ ನಿರ್ದೇಶಕರ ಮಾರ್ಗದರ್ಶನ ಹಾಗೂ ಸಲಹೆ-ಸಹಕಾರದೊಂದಿಗೆ ಡೇರಿಯನ್ನು ಮಾದರಿಯಾಗಿ ಅಭಿವೃದ್ಧಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ಈ ವೇಳೆ ಸಂಘದ ಉಪಾಧ್ಯಕ್ಷ ಕುಮಾರ, ಮಾಜಿ ಅಧ್ಯಕ್ಷ ಸೂರಪ್ಪರ ಕೃಷ್ಣೇಗೌಡ, ನಿರ್ದೇಶಕರಾದ ಗರಡಿಮನೆ ಚಂದ್ರಶೇಖರ, ದೊಡ್ಡೈದಪ್ಪರ ರಾಮೇಗೌಡ, ಚನ್ನಕೇಶವ, ಲಕ್ಷ್ಮೇಗೌಡ, ಲೀಲಾವತಿ, ಮಂಜುಳಾ, ಶ್ರೀನಿವಾಸ, ಸ್ವಾಮಿ ಸೇರಿದಂತೆ ಇತರರು ನೂತನ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಸಿಹಿ ವಿತರಿಸಲಾಯಿತು.