ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಐದು ದೀಪ ವೃತ್ತದಲ್ಲಿ ಜಿಲ್ಲಾಧ್ಯಕ್ಷ ತಾಳಶಾಸನ ಎಸ್.ಆನಂದ್ ಹಾಗೂ ತಾಲೂಕು ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀಗಳ ಸ್ಮರಣೆ ಮಾಡಿದರು.
ತಹಸೀಲ್ದಾರ್ ಬಸವರೆಡ್ಡಪ್ಪರೋಣದ ಮಾತನಾಡಿ, ಡಾ.ಶಿವಕುಮಾರಸ್ವಾಮಿ ಅವರು ನಾಡಿನಲ್ಲಿ ವಿದ್ಯಾದಾನ, ಅನ್ನದಾನಕ್ಕೆ ಮಹತ್ವವನ್ನು ನೀಡುವ ಮೂಲಕ ನಾಡಿಗೆ ಕಳಶಪ್ರಾಯವಾಗಿದ್ದರು. ಹಾಗಾಗಿ ಅಂತಹ ಮಹಾನ್ ಗುರುಗಳ ಆದರ್ಶವನ್ನು ನಾವೆಲ್ಲರು ಜೀವನದಲ್ಲಿ ಅಳವಡಿಸಿಕೊಂಡು ಸದಾ ಅವರನ್ನು ಸ್ಮರಿಸುವ ಜೊತೆಗೆ ಅವರು ನಡೆದು ಬಂದದಾರಿಯಲ್ಲಿ ಸಾಗಬೇಕು ಎಂದರು.ಜಿಲ್ಲಾಧ್ಯಕ್ಷ ಎಸ್.ಆನಂದ್ ತಾಳಶಾಸನ ಮಾತನಾಡಿ, ಡಾ.ಶಿವಕುಮಾರಸ್ವಾಮಿ ಲಕ್ಷಾಂತರ ಮಂದಿ ಜನರ ಬದುಕಿಗೆ ಆಶಾದಾಯಕವಾಗಿದ್ದಾರೆ. ಮಠದಲ್ಲಿ ಓದಿದ ಸಾವಿರಾರು ಮಂದಿ ವಿದ್ಯಾರ್ಥಿಗಳು ದೊಡ್ಡದೊಡ್ಡ ಹುದ್ದೆಗಳನ್ನು ಅಲಂಕರಿಸುವ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ ಎಂದರು.
ಪ್ರತಿನಿತ್ಯ ಹತ್ತು ಸಾವಿರಕ್ಕೂ ಅಧಿಕ ಮಕ್ಕಳು, ಭಕ್ತರು, ಸಾರ್ವಜನಿಕರಿಗೆ ಅನ್ನದಾಸೋಹ ನಡೆಸುತ್ತಿರುವ ಜಗತ್ತಿನ ಏಕೈಕ ಮಠ ಸಿದ್ದಗಂಗಾ ಮಠ. ಶ್ರೀಗಳ ನಡೆದು ಬಂದಹಾದಿಯಲ್ಲಿ ನಡೆಯುವ ಮೂಲಕ ಅವರ ಆದರ್ಶವನ್ನು ಪಾಲನೆ ಮಾಡಬೇಕು ಎಂದರು.ಮುಖಂಡ ಎಸ್.ಎ.ಮಲ್ಲೇಶ್ ಮಾತನಾಡಿ, ಸಿದ್ದಗಂಗಾ ಶ್ರೀಗಳ 7 ನೇ ವರ್ಷದ ಪುಣ್ಯಸ್ಮರಣೆಯನ್ನು ವೀರಶೈವಲಿಂಗಾಯತ ಸಮುದಾಯದ ವತಿಯಿಂದ ಆಚರಿಸುತ್ತಿದ್ದೇವೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ನಮಗೆಲ್ಲ ಆದರ್ಶಪ್ರಾಯವಾಗಲಿದೆ ಎಂದರು.
ಇದೇ ವೇಳೆ ಸಾರ್ವಜನಿಕರು ಮತ್ತು ಭಕ್ತರಿಗೆ ಅನ್ನದಾಸೋಹ ವಿತರಿಸಲಾಯಿತು. ವೀರಶೈವ ಲಿಂಗಾಯುತ ಮಹಾಸಭಾ ತಾಲೂಕು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಜಯಣ್ಣ, ಮುಖಂಡರಾದ ಚಂದ್ರಶೇಖರಯ್ಯ, ಕಲಿಗಣೇಶ್, ಸುರೇಶ್, ಮೀನಾಕ್ಷಿ, ಮಹದೇವಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಆದರ್ಶ, ಅಲ್ಪಳ್ಳಿಗೋವಿಂದಯ್ಯ, ಟೌನ್‌ಚಂದ್ರು, ಧನ್ಯಕುಮಾರ್, ಚಂದ್ರಶೇಖರಯ್ಯ ಸೇರಿದಂತೆ ವೀರಶೈವಲಿಂಗಾಯತ ಸಮುದಾಯದ ಮುಖಂಡರು, ಸಾರ್ವಜನಿಕರು ಇದ್ದರು.